ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಎರಡು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಗದ್ದಲ ಎದ್ದಿದೆ. ಅದರಲ್ಲೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಹೆಸರಿನಲ್ಲಿ ಮತದಾರರ ಖಾಸಗಿ ಸಂಗತಿಗಳು ಸೋರಿಕೆ ಆಗಿವೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅದರಲ್ಲೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸಿದೆ. ಈ ಅನುಮಾನಕ್ಕೆ ಕಾರಣ ಹೊಂಬಾಳೆ ಹೆಸರು.
ಚಿತ್ರೋದ್ಯಮದ ಬಹುತೇಕರಿಗೆ ಗೊತ್ತಿರುವಂತೆ ಹೊಂಬಾಳೆ ಫಿಲ್ಮಸ್ ಸಂಸ್ಥೆಯು ಅಶ್ವತ್ಥ್ ನಾರಾಯಣ್ ಅವರ ಸಂಬಂಧಿ ವಿಜಯ್ ಕುಮಾರ್ ಅವರದ್ದು. ಈ ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಚಿತ್ರಗಳು ನಿರ್ಮಾಣಗೊಂಡಿವೆ. ‘ಹೊಂಬಾಳೆ’ ಎನ್ನುವ ಹೆಸರೇ ಮತದಾರರ ಪಟ್ಟಿಯ ವಿವಾದಕ್ಕೆ ಮುನ್ನುಡಿಯಾಗಿದ್ದು, ಇದು ಚಿಲುಮೆ ಎನ್ನುವ ಹೆಸರಿನ ಸಂಸ್ಥೆಯ ಜೊತೆ ತಳುಕುಹಾಕಿಕೊಂಡಿದೆ. ಮತದಾರರ ಪಟ್ಟಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಹೆಸರು ಬಲವಾಗಿ ಕೇಳಿಬಂದಿದೆ. ಚಿಲುಮೆ ಸಂಸ್ಥೆಯು ಈ ಹಿಂದೆ ಹೊಂಬಾಳೆ ಹೆಸರಿನಲ್ಲಿ ಚಟುವಟಿಕೆಯಲ್ಲಿತ್ತು ಎನ್ನುವುದು ವಿವಾದಕ್ಕೆ ಕಾರಣವಾದ ಅಂಶ.
ಹೊಂಬಾಳೆ ಹೆಸರು ಕೇಳಿ ಬರುತ್ತಿದ್ದಂತೆಯೇ ಆದ ಘಟನೆಗೂ ಅಶ್ವತ್ಥ್ ನಾರಾಯಣ್ ಅವರಿಗೆ ನೇರ ಸಂಬಂಧವಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆ ಫಿಲ್ಮಸ್ ಸಂಸ್ಥೆಯನ್ನು ತಿವಿಯಲು ಈ ಬ್ಯಾನರ್ ನಿಂದ ನಿರ್ಮಾಣವಾದ ಎರಡು ಚಿತ್ರಗಳ ಹೆಸರನ್ನು ಉಪಯೋಗಿಸಿಕೊಂಡು, ಹೊಂಬಾಳೆ ಫಿಲ್ಮ್ಸ್ ನ ಅಶ್ವತ್ಥ್ ನಾರಾಯಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು
ಈ ಕುರಿತು ಸರಣಿಯ ಟ್ವಿಟ್ ಮಾಡಿರುವ ಸಿದ್ಧರಾಮಯ್ಯ, ‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕಥೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ, ಪಂಜುರ್ಲಿಯ ದಂತಕಥೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು’ ಎಂದು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಭಾರೀ ವೈರಲ್ ಆಗಿದೆ. ಅಲ್ಲದೇ ಅನೇಕರು ಇದಕ್ಕೆ ಸ್ಪಂದಿಸಿದ್ದಾರೆ.