ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ನಗರದ ಉಪ ನೋಂದಣಾಧಿಕಾರಿ ಕಚೇರಿ (Sub-Registrar Office) ಮೇಲೆ ಗುರುವಾರ ನಡೆದಿದ್ದ ಲೋಕಾಯುಕ್ತ ಪೊಲೀಸರ (Lokayukta police) ದಾಳಿ, ಸತತ ಏಳು ಗಂಟೆಗಳ ನಂತರ ಪೂರ್ಣಗೊಂಡಿದೆ.
ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಭ್ರಷ್ಟಾಚಾರದ ಹಾವಳಿ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಹಲವು ಕಚೇರಿಗಳ ಮೇಲೆ ಸಾಮೂಹಿಕ ರೇಡ್ ನಡೆಸಿದರು. ದೊಡ್ಡಬಳ್ಳಾಪುರ ಕಚೇರಿ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಸೇರಿದಂತೆ ಅಧಿಕಾರಿಗಳ ವಿಚಾರಣೆ ರಾತ್ರಿ 11.30 ಕ್ಕೆ ಮುಗಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್
ಈ ವೇಳೆ ಸಣ್ಣ ಪ್ರಮಾಣದ ದಾಖಲೆಗಳನ್ನು ಹೊರತು ಪಡಿಸಿದರೆ ಲೋಕಾಯುಕ್ತ ಪೊಲೀಸರು ಮತ್ಯಾವುದೇ ದಾಖಲೆ, ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದು ಕಂಡು ಬರಲಿಲ್ಲ. ಇನ್ನೂ ಲೋಕಾಯುಕ್ತ ಪೊಲೀಸರ ದಾಳಿಯ ವೇಳೆ ಅಧಿಕಾರಿಗಳ ಬೆಂಬಲಿಸಿ ಕುಟುಂಬದವರಲ್ಲದ ಕೆಲವರು ಕಚೇರಿಯ ಬಳಿ ತಡರಾತ್ರಿವರೆಗೂ ಕಾದು ನಿಂತಿದ್ದು ಪೊಲೀಸರಲ್ಲಿ ಅನುಮಾನವನ್ನುಂಟು ಮಾಡಿತ್ತು.
ಅಂದಹಾಗೆ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಲೋಕಾಯುಕ್ತ ಎಸ್‍ಪಿ ಪವನ್ ನೆತ್ತೂರು ನೇತೃತ್ವದಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆದಿದ್ದು, ಅವರೊಂದಿಗೆ ಲೋಕಾಯುಕ್ತ ಡಿವೈಎಸ್‍ಪಿ ರೇಣುಕಾ ಪ್ರಸಾದ್ ಮತ್ತು ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿ ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ದಾಳಿಯ ವೇಳೆ ಕಚೇರಿಯ ಒಳಗಿದ್ದ, ಸುಮಾರು ಇಪ್ಪತ್ತು ಮಂದಿ ಸಾರ್ವಜನಿಕರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ಬಿಟ್ಟು ಸಾರ್ವಜನಿಕರನ್ನು ವಿಚಾರಣೆ ನಡೆಸುತ್ತಿದ್ದಾರೆಂದು ಕೆಲವರು ಆಕ್ಷೇಪಿಸಿದರು.
ನಂತರ ವಿಚಾರಣೆ ಪೂರ್ಣಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು 15 ಮಂದಿ ಸಾರ್ವಜನಿಕರನ್ನು ಹೊರ ಕಳಿಸಿದ್ದರು. ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ಇಸ್ರೇಲ್ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು – ಪ್ರಧಾನಿ ಮೋದಿ ಅಭಿನಂದನೆ