ಕಾಂತಾರ ಸಿನಿಮಾ ನೋಡಿ ಅಚ್ಚರಿ ಎನ್ನುವಂತೆ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಕರೆ ಮಾಡಿದ್ದರು ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಅದೊಂದು ಅನಿರೀಕ್ಷಿತ ಕರೆ ಆಗಿದ್ದರಿಂದ ರಿಷಬ್ ಕೂಡ ಅಚ್ಚರಿ ಪಟ್ಟಿದ್ದರು. ಸೂಪರ್ ಸ್ಟಾರ್ ಒಬ್ಬರು ಸಿನಿಮಾ ನೋಡಿ, ಕರೆ ಮಾಡಿದ್ದರಿಂದ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ರಿಷಬ್ ರೆಡಿಯಾಗಿದ್ದರು. ಅಷ್ಟರಲ್ಲೇ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ ರಜನಿ. ಸ್ವತಃ ರಿಷಬ್ ಅವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.
ಕಾಂತಾರ (Kantara) ಮೂಲಕ ನ್ಯಾಷಿನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಹೇಳಿದ್ದಾರೆ. ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದಾರೆ. ರಜನಿ ಮಾತು ಕೇಳಿ ರಿಷಬ್ ಕೂಡ ಖುಷ್ ಆಗಿದ್ದಾರೆ.
ಈ ಹಿಂದೆ ರಜನಿ ಕರೆ ಮಾಡಿದಾಗ ಥ್ರಿಲ್ ಆಗಿದ್ದ ರಿಷಬ್, ಮಾತಿನ ಮಧ್ಯೆ ರಜನಿ ಸ್ಟೈಲ್ ನಲ್ಲೇ ಸಿಗರೇಟು ತಿರುಗಿಸಿ ಬಾಯಿಗೆ ಹಾಕಿಕೊಂಡ ದೃಶ್ಯವನ್ನು ನೆನಪಿಸಿದ್ದಾರೆ. ಈ ದೃಶ್ಯ ಮಾಡುವಾಗ ನಿಮ್ಮನ್ನೇ ನೆನಪಿಸಿಕೊಂಡು, ನಿಮ್ಮದೇ ಸ್ಟೈಲ್ ನಲ್ಲೇ ಅದನ್ನು ಮಾಡಲು ಪ್ರಯತ್ನಿಸಿದ್ದೇನೆ ಎಂದು ರಿಷಬ್ ಹೇಳಿದ್ದಾರೆ. ಸಿನಿಮಾ, ಮೇಕಿಂಗ್, ಕಥೆ, ನಟನೆ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ರಜನಿ ಮುಕ್ತವಾಗಿ ರಿಷಬ್ ಜೊತೆ ಮಾತನಾಡಿದ್ದಾರೆ. ಎಲ್ಲಾ ವಿಭಾಗದ ಕೆಲಸವನ್ನೂ ರಜನಿ ಮೆಚ್ಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊದಲ ದಿನದಂದು ಈವರೆಗೂ ಹಣ ಗಳಿಕೆಯಲ್ಲಿ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. 200 ಕೋಟಿಗೂ ಅಧಿಕ ಹಣವನ್ನು ಕಾಂತಾರ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಈವರೆಗೂ ಕರ್ನಾಟಕವೊಂದರಲ್ಲೇ 100 ಕೋಟಿಗೂ ಅಧಿಕ ಹಣ ತಂದುಕೊಟ್ಟಿರುವ ಕಾಂತಾರ, ತೆಲಂಗಾಣ, ಉತ್ತರ ಭಾರತ, ಕೇರಳ, ವಿದೇಶದಿಂದ ಬಂದ ಒಟ್ಟು ಹಣ 80 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.