ಸಮಂತಾ ಅಭಿನಯದ ‘ಯಶೋದಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮನಮೋಹಕ ದೃಶ್ಯಗಳು ಮತ್ತು ಬಿಜಿಎಂನೊಂದಿಗೆ ಈ ಟ್ರೇಲರ್ ಎಲ್ಲರ ಮೆಚ್ಚುಗೆ ಪಡೆದಿದೆ. ‘ಯಶೋದಾ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಅಲ್ಲದೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಗುರುವಾರ ಸಂಜೆ ಚಿತ್ರದ ಐದು ಭಾಷೆಗಳ ಟ್ರೇಲರ್ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡದ ಅವತರಣಿಕೆಯನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಹಿಂದಿಯಲ್ಲಿ ವರುಣ್ ಧವನ್ ಬಿಡುಗಡೆ ಮಾಡಿದ್ದಾರೆ.
ಟ್ರೈಲರ್ನಲ್ಲಿ ಸಮಂತಾ ಅವರನ್ನು ಬಾಡಿಗೆ ತಾಯಿ ಯಶೋದಾ ಪಾತ್ರದಲ್ಲಿ ತೋರಿಸಲಾಗಿದೆ. ಸಮಂತಾ ಅವರ ಆಕ್ಷನ್ ದೃಶ್ಯಗಳ ಹೊರತಾಗಿ, ಉನ್ನಿ ಮುಕುಂದನ್ ಮತ್ತು ಸಮಂತಾ ನಡುವಿನ ಪ್ರಣಯವು, ಅವರಿಬ್ಬರ ನಡುವೆ ಪ್ರೀತಿಯ ಟ್ರ್ಯಾಕ್ ಇದೆ ಎಂದು ತೋರಿಸುತ್ತದೆ. ಇದನ್ನೂ ಓದಿ:ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್
ಟ್ರೇಲರ್ ಬಿಡುಗಡೆ ಮಾಡಿದ ವಿಜಯ್ ದೇವರಕೊಂಡ, ಸೂರ್ಯ, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವ ನಿರ್ಮಾಪಕ ಶಿವಲೆಂಕ ಕೃಷ್ಣ ಪ್ರಸಾದ್, ‘ಟ್ರೇಲರ್ಗೆ ಎಲ್ಲ ಭಾಷೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಯಾದ ತಕ್ಷಣವೇ ವೈರಲ್ ಆಗಿದೆ. ಈಗಾಗಲೇ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಮಂತಾ ಅಭಿನಯ, ಮಣಿಶರ್ಮಾ ಅವರ ಬಿಜಿಎಂ ಮತ್ತು ಚಿತ್ರದ ಪರಿಕಲ್ಪನೆಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಕಥೆಯ ಮೂಲ ಕಥಾವಸ್ತುವನ್ನು ಬಹಿರಂಗಪಡಿಸಿದ್ದರೂ, ಪ್ರೇಕ್ಷಕರು ಥ್ರಿಲ್ ಆಗುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ.
ಅಂದಹಾಗೆ, ಹರಿ-ಹರೀಶ್ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಮಂತಾ ಜೊತೆಗೆ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.