ಬೆಂಗಳೂರು: ಬಯೋಕಾನ್ (Biocon) ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರ ಪತಿ, ಬಯೋಕಾನ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಜಾನ್ ಶಾ (John Shaw) ಅವರು ಸೋಮವಾರ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಜಾನ್ ಶಾ ಅವರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಶಾ ನಿಧನ ಹೊಂದಿದ್ದಾರೆ. ಶಾ ನಿಧನಕ್ಕೆ ಉದ್ಯಮ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಸೋಮವಾರ ಸಂಜೆ ನೆರವೇರಲಿದೆ.
ಇಂಗ್ಲೆಂಡ್ ಮೂಲದ ಜಾನ್ ಶಾ ಅವರು ವಿದೇಶಿ ಪ್ರವರ್ತಕರಾಗಿ ಮತ್ತು ವಿವಿಧ ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿ ಮತ್ತು ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಶಾ ಅವರು ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ರಾಜಕೀಯ ಆರ್ಥಿಕತೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಜೊತೆಗೆ ಅದೇ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಹಿರಿಯ ಪತ್ರಕರ್ತ ಕೀನ್ಯಾದಲ್ಲಿ ಹತ್ಯೆ
2001 ರಲ್ಲಿ ಇವರ ಬಯೋಕಾನ್ ಸಂಸ್ಥೆ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಅಣುವಿನ ತಯಾರಿಕೆಗಾಗಿ ಹಾಗೂ ಆಹಾರ ಮತ್ತು ಔಷಧ ಆಡಳಿತದ ಅನುಮೋದನೆಯನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ. ಕಿರಣ್ ಮಜುಂದಾರ್ ತಮ್ಮ ಬಯೋಕಾನ್ ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ತಮ್ಮ ಮನೆಯ ಶೆಡ್ ಒಂದರಲ್ಲಿ. ಅದೂ ಕೇವಲ 10 ಸಾವಿರ ರೂ. ಬಂಡವಾಳದ ಮೂಲಕ. ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ತಮ್ಮ ನಿರಂತರ ಪರಿಶ್ರಮದಿಂದ ಇಂದು ಬಯೋಕಾನ್ ಸಂಸ್ಥೆ ವಿಶ್ವದಲ್ಲೇ 7ನೇ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ