ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ (Nirbhaya) ಕೇಸ್‌ನಂತಹ ಇನ್ನೊಂದು ಆಘಾತಕಾರಿ ಅತ್ಯಾಚಾರ ಪ್ರಕರಣ (Rape Case) ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ. ಘಟನೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿರುವುದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಗಾಜಿಯಾಬಾದ್‌ನ ಪುರುಷರ ಗುಂಪೊಂದು ದೆಹಲಿ ಮೂಲದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ್ದಾರೆ. ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.
ಮಂಗಳವಾರ ಮುಂಜಾನೆ 3:30 ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆ ಬಳಿಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದಾರೆ. ಮಹಿಳೆ ನೆಲೆದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಬಳಿಕ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಹಾಗೂ ಸಂತ್ರಸ್ತ ಮಹಿಳೆ ನಡುವೆ ಕುಟುಂಬ ಆಸ್ತಿ ವಿಚಾರಕ್ಕೆ ವಿವಾದ ನಡೆದಿದೆ. ಬಳಿಕ ಮಹಿಳೆಯನ್ನು ಅಪಹರಿಸಿ, 2 ದಿನಗಳ ಕಾಲ ಸೆರೆಯಲ್ಲಿಟ್ಟು ಅಮಾನುಷವಾಗಿ ಚಿತ್ರಹಿಂಸೆ ನೀಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹಿಳೆಯ ಬೆತ್ತಲೆ ದೇಹ ಸೂಟ್‍ಕೇಸ್‍ನಲ್ಲಿ ಪತ್ತೆ – ರೇಪ್ ಶಂಕೆ
ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗ (DCW) ಹೇಳಿಕೆ ನೀಡಿ, ಮಹಿಳೆಯನ್ನು ನಾಲ್ವರು ಪುರುಷರು ಸ್ಕಾರ್ಪಿಯೋದಲ್ಲಿ ಅಪಹರಿಸಿದ್ದು, 2 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ, ರಸ್ತೆ ಬದಿ ಎಸೆದು ಹೋಗಿದ್ದಾರೆ. ಮಹಿಳೆ ಪತ್ತೆಯಾದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಕೆಯ ಖಾಸಗಿ ಭಾಗದಲ್ಲಿ ಕಬ್ಬಿಣದ ರಾಡ್ (Iron Rod) ಕೂಡಾ ಪತ್ತೆಯಾಗಿತ್ತು. ಆಕೆಯ ಸ್ಥಿತಿ ಇದೀಗ ಗಂಭೀರವಾಗಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಚಿಕನ್ ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ಭೂಪ
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್, ಈ ಘಟನೆ ಅತ್ಯಂತ ಭೀಕರ ಹಾಗೂ ಆತಂಕಕಾರಿಯಾಗಿದೆ. ಈ ಘಟನೆ ನಿರ್ಭಯಾ ಪ್ರಕರಣವನ್ನು ನೆನಪಿಸುತ್ತದೆ. ಎಲ್ಲಾ ಆರೋಪಿಗಳನ್ನೂ ಈ ಕೂಡಲೆ ಬಂಧಿಸಬೇಕು ಹಾಗೂ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಮಹಿಳೆಯರು ಹಾಗೂ ಮಕ್ಕಳು ಇನ್ನೂ ಎಷ್ಟು ಇಂತಹ ಕ್ರೌರ್ಯಕ್ಕೆ ಒಳಗಾಗಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲಳಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.