ರಾಮನಗರ: ಕಳೆದ ಒಂದುವರೆ ತಿಂಗಳಿನಿಂದ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ರಾಮನಗರದಲ್ಲಿ (Ramanagara) ಆರ್ಭಟಿಸಲು ಶುರು ಮಾಡಿದ್ದಾನೆ. ಕಳೆದ ಬಾರಿ ಆದ ನಷ್ಟದಿಂದ ಚೇತರಿಸಿಕೊಳ್ಳುವ ಮುನ್ನವೆ, ಮತ್ತೆ ಮಹಾಮಳೆಯಿಂದ ರೇಷ್ಮೆ ನಾಡಿದ ಜನತೆ ತತ್ತರಿಸಿಹೋಗಿದ್ದಾರೆ.
ಅರ್ಕಾವತಿ ನದಿ (Arkavathi River) ಪಾತ್ರದ ಜನರಲ್ಲಿ ಮತ್ತೆ ಪ್ರವಾಹ ಆತಂಕ ಹೆಚ್ಚಾಗಿದೆ. ಜಿಲ್ಲಾದ್ಯಂತ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ ಭರ್ತಿಯಾಗಿದ್ದು, ಕಣ್ವ ನದಿಗೆ 2 ಸಾವಿರ ಕ್ಯೂಸೆಕ್ ನೀರು ಹರಿಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನದಿ ಅಕ್ಕ ಪಕ್ಕದ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ನೀರಿನ ರಭಸಕ್ಕೆ ತೆಂಗು, ಬಾಳೆ, ತುಳಸಿ ಸೇರಿ ಹಲವು ಬೆಳೆಗಳು ನಾಶವಾಗಿವೆ. ಕಳೆದ ಒಂದೂವರೆ ತಿಂಗಳಿನ ಹಿಂದೆ ಉಂಟಾಗಿದ್ದ ಪ್ರವಾಹ ಸುಧಾರಿಸಿಕೊಳ್ಳುವ ಮುನ್ನವೇ ಮತ್ತೆ ಮಳೆ ಸಂಕಷ್ಟ ಉಂಟಾಗಿರುವುದು ರೈತರನ್ನು ಕಂಗಾಲಾಗಿಸಿದೆ. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಮತ್ತೊಂದೆಡೆ ರಾಮನಗರದ ಅರ್ಕೇಶ್ವರ ಬಡಾವಣೆಯಲ್ಲೂ ಮತ್ತೆ ಮಳೆ ಅವಾಂತರ ಸೃಷ್ಠಿಯಾಗಿದೆ. ಬಡಾವಣೆಯ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿವೆ. ರೇಷ್ಮೆ ನೂಲು ತೆಗೆಯವ ಸಣ್ಣ ಕೈಗಾರಿಕಾ ಮಳಿಗೆಗಳಿಗೂ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಯಂತ್ರಗಳು ಕೂಡಾ ನೀರಿಗಾಹುತಿಯಾಗಿವೆ. ಮನೆಯಿಂದ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದು ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್ ನಾಮಕರಣ
ಒಂದೇ ತಿಂಗಳ ಅಂತರದಲ್ಲಿ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆ ಎರಡನೇ ಬಾರಿಗೆ ಕೋಡಿ ಬಿದ್ದಿದೆ. ಕೆರೆ ಕೋಡಿ ಪರಿಣಾಮ ಹಲಗೂರು-ಚನ್ನಪಟ್ಟಣ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ರಸ್ತೆ ಮೇಲೆ ಕೆರೆ ಕೋಡಿ ನೀರು ರಭಸವಾಗಿ ಹರಿಯುತ್ತಿದ್ದು, ಲಾರಿ ಚಾಲಕನ ದುಸ್ಸಾಹಸಕ್ಕೆ ರಸ್ತೆಯಲ್ಲಿ ದಿನಸಿ ತುಂಬಿದ ಲಾರಿ ಸಿಲುಕಿದೆ. ಸದ್ಯ ಸ್ಥಳೀಯ ಆಡಳಿತ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಲಾರಿ ಹೊರತೆಗೆದಿದ್ದಾರೆ. ಅಲ್ಲದೇ ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಸರ್ಕಾರಿ ಶಾಲೆಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚನ್ನಪಟ್ಟಣದ ಬಿಡಿ ಕಾಲೋನಿಯಲ್ಲೂ ಮಳೆ ಆರ್ಭಟಕ್ಕೆ ಜನ ಹೈರಾಣಾಗಿದ್ದಾರೆ.
ಒಟ್ಟಾರೆ ರಾಮನಗರ ಜಿಲ್ಲೆಯನ್ನು ಬಿಟ್ಟೂಬಿಡದೇ ಕಾಡುತ್ತಿರುವ ವರುಣರಾಯ ಇನ್ನೆಷ್ಟು ದಿನ ಆರ್ಭಟಿಸುತ್ತಾನೋ ಅನ್ನುವ ಭೀತಿ ಜನರನ್ನು ಆವರಿಸಿದೆ. ಬಯಲು ಸೀಮೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ರೈತ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿದೆ. ನಿತ್ಯ ಸುರಿಯುತ್ತಿರುವ ರಣಮಳೆ ತಗ್ಗು ಪ್ರದೇಶದ ಜನರ ನಿದ್ದೆಯನ್ನು ಕಸಿದಿರುವುದು ದುರದೃಷ್ಟಕರ.