ಪಣಜಿ: ನೌಕಾಪಡೆಯ ಮಿಗ್ 29ಕೆ(MiG-29K) ವಿಮಾನವು ತಾಂತ್ರಿಕ ದೋಷದಿಂದ ಇಂದು ಗೋವಾ ಕರಾವಳಿಯಲ್ಲಿ ದಿನನಿತ್ಯದ ಹಾರಾಟದ ಸಮಯದಲ್ಲಿ ಪತನಗೊಂಡಿದೆ.
ಪತನಗೊಳ್ಳುತ್ತಿದ್ದಂತೆ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆ( Indian Navy) ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ (BoI) ಆದೇಶಿಸಲಾಗಿದೆ.
2019 ರಿಂದ ಲೆಕ್ಕ ಹಾಕಿದರೆ MiG-29K ನಾಲ್ಕನೇ ಅಪಘಾತ ಪ್ರಕರಣ ಇದಾಗಿದೆ. ವಿಮಾನವು ಹಾರಾಟ ನಡೆಸಿ ವಾಯುನೆಲೆಗೆ ಮರಳುತ್ತಿದ್ದಾಗ ಪತನಗೊಂಡಿದೆ. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು
MiG-29K ವಿಮಾನಕ್ಕೆ ರಷ್ಯಾ ನಿರ್ಮಿತ K-36D-3.5 ಎಜೆಕ್ಷನ್ ಸೀಟ್ ಅಳವಡಿಸಲಾಗಿದೆ. ಎಜೆಕ್ಷನ್ ಹ್ಯಾಂಡಲ್ ಎಳೆದ ಕೂಡಲೇ ಹಿಂದುಗಡೆ ಪೈಲಟ್ ಅನ್ನು ಹೊರಹಾಕಿ ನಂತ ಮುಂದಿರುವ ಪೈಲಟ್ ಅನ್ನು ಹೊರಕ್ಕೆ ಎಸೆಯುತ್ತದೆ.
ಹಾರುವ ಶವಪೆಟ್ಟಿಗೆ:
ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿಯ ಒಟ್ಟು 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 100ಕ್ಕೂ ಅಧಿಕ ಮಿಗ್ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?
2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು. ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸುವ ಮೂಲಕ ಸಾಧನೆ ನಿರ್ಮಿಸಿದ್ದರು.