ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆಯ ಖ್ಯಾತ ನಟಿ ದಿವ್ಯಾ ಶ್ರೀಧರ್ (Divya Sridhar) ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಗಂಡನಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಅರ್ನವ್ (Arnav) ಅಲಿಯಾಸ್ ಅಮ್ಜದ್ ಖಾನ್ (Amjad Khan) ವಿರುದ್ಧ ವಿಡಿಯೋ ಮಾಡಿದ್ದಾರೆ.
ಅವರು ಮಾತನಾಡಿರುವ ವಿಡಿಯೋದಲ್ಲಿ ‘ನಾನು ಮತ್ತು ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದೇವೆ. 2017ರಿಂದ ನಾನು ಮತ್ತು ಅರ್ನವ್ ಇಬ್ಬರೂ ಲಿವಿಂಗ್ ಟು ಗೆದರ್ ಇದ್ದೆವು. 5 ವರ್ಷದಿಂದ ನಾವು ಒಟ್ಟಿಗೆ ಇದ್ದೇವೆ. ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‍ಡೌನ್ ಟೈಂನಲ್ಲಿ ಅವನಿಗೆ ಏನು ಕೆಲಸ ಇರಲಿಲ್ಲ. ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್ ಕೊಡಿಸಿ, 30 ಸಾವಿರದಂತೆ ಲೋನ್ ಕಟ್ಟಿದ್ದೇನೆ. ಅವನಿಗೆ ಕೆಲಸವಿಲ್ಲದಿದ್ದರೂ, ನಾನೇ ಸಾಕಿದ್ದೇನೆ. ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೇನೆ. ಆದರೆ, ಅವನಿಂದಲೇ ಈಗ ಕಿರುಕುಳ (Harassment) ಉಂಟಾಗಿದೆ’ ಎಂದು ಹೇಳಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ನಟಿ, ‘ನಿನ್ನೆ ನನ್ನ ಗಂಡ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಕೈಕಾಲಿನ್ನೆಲ್ಲಾ ತುಳಿದು ನೋವು ತಡೆಯಲಾಗದೇ ಪೇಚಾಡಿದ್ದೇನೆ. ಆಗ ಲೋ ಬಿಪಿಯಾಗಿ ಅಸ್ವಸ್ಥಳಾಗಿದ್ದೆ. ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂತು. ನನ್ನ ಗಂಡ ಮನೆಯಲ್ಲೇ ಇದ್ದ. ಆದರೂ ನನ್ನನ್ನು ಆಸ್ಪತ್ರೆಗೆ ಸೇರಿಸಿಲ್ಲ. ನನಗೆ ಪ್ರಜ್ಞೆ ಬಂದ ಮೇಲೆ ಮನೆಯಿಂದ ಹೊರಗಡೆ ಹೋದ. ಅಲ್ಲದೇ ಹೊಟ್ಟೆ ನೋವಿನಿಂದ ನಾನು ನರಳಿದೆ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಯ್ತು. ನನ್ನ ಗಂಡನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್‍ಮೆಂಟ್‍ನಲ್ಲಿ ಇದ್ದಾನೆ ಎಂದು ಹೇಳಿದ್ರು’ ಎನ್ನುತ್ತಾರೆ ದಿವ್ಯಾ ಶ್ರೀಧರ್.
ಈಗ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟ್ಟೆಗೆ ತುಂಬಾ ಪೆಟ್ಟಾಗಿರೋದ್ರಿಂದ ಯಾವಾಗ ಬೇಕಿದ್ದರು ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರಂತೆ. ‘ಅವನಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ಆದ್ರೆ ಅವನು ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ನನ್ನ ಮೆಸೇಜ್‍ಗೆ ರಿಪ್ಲೈ ಕೂಡ ಮಾಡ್ತಿಲ್ಲ. ನನಗೆ ನನ್ನ ಗಂಡ ಬೇಕು. ನನ್ನ ಮಗುವಿಗೆ ಏನೂ ಆಗಬಾರದು ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ದಿವ್ಯಾ ಶ್ರೀಧರ್.
ದಿವ್ಯಾ ಶ್ರೀಧರ್ ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಹಲವು ಸಿನಿಮಾಗಳಲ್ಲೂ ನಟಿಸಿದ್ದು, ಆಕಾಶ ದೀಪ ಧಾರಾವಾಹಿಯ ಮೂಲಕ ಸಖತ್ ಫೇಮಸ್ ಆಗಿದ್ದವರು. ಇದೀಗ ತಮಿಳಿನ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ದಿವ್ಯಾ ಶ್ರೀಧರನ್ ಕಿರುಕುಳಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.