ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

Public TV
2 Min Read
Infosys Narayana Murthy

ಅಹಮದಾಬಾದ್‌: ಕಾಂಗ್ರೆಸ್(Congress) ನೇತೃತ್ವದ ಯುಪಿಎ(UPA) ಸರ್ಕಾರ ಅಂತಿಮ ವರ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುತ್ತಿತ್ತು. ಇದರಿಂದಾಗಿ ಭಾರತದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂದು ಇನ್ಫೋಸಿಸ್‌ನ(Infosys) ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ(Narayana Murthy) ಹೇಳಿದ್ದಾರೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕ್ಯಾಂಪಸ್‌ನಲ್ಲಿ ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಲಂಡನ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ನಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಮನಮೋಹನ್ ಸಿಂಗ್(Manmohan Singh) ಒಬ್ಬ ಅಸಾಧಾರಣ ವ್ಯಕ್ತಿ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರ ಅವಧಿಯಲ್ಲಿ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲವೂ ವಿಳಂಬ ಆಗುತ್ತಿತ್ತು. ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

manmohan singh

2008-2012ರ ಅವಧಿಯಲ್ಲಿ ನಾನು ಲಂಡನ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನ(HSBC Bank) ಮಂಡಳಿ ಸದಸ್ಯನಾಗಿದ್ದೆ. ಈ ವೇಳೆ ಆರಂಭದ ಕೆಲ ವರ್ಷ ಸಭೆಗಳಲ್ಲಿ ಚೀನಾದ(China) ಹೆಸರನ್ನು 2-3 ಬಾರಿ ಪ್ರಸ್ತಾಪಿಸಿದರೆ ಭಾರತದ(India) ಹೆಸರು ಕೇವಲ ಒಂದು ಬಾರಿ ಪ್ರಸ್ತಾಪವಾಗುತ್ತಿತ್ತು. ಆದರೆ ದುರದೃಷ್ಟವಶಾತ್‌ ನಂತರದ ವರ್ಷದಲ್ಲಿ ಭಾರತದ ಹೆಸರು ಪ್ರಸ್ತಾಪವಾಗುತ್ತಿರಲಿಲ್ಲ ಎಂದು ತಿಳಿಸಿದರು.

2012ರಲ್ಲಿ ನಾನು ಎಚ್‌ಎಸ್‌ಬಿಸಿಯನ್ನು ತೊರೆದಾಗ ಬಹಳ ಅಪರೂಪಕೊಮ್ಮೆ ಭಾರತದ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ ಚೀನಾದ ಹೆಸರು ಕನಿಷ್ಠ 30 ಬಾರಿ ಪ್ರಸ್ತಾಪವಾಗುತ್ತಿತ್ತು. ಈ ಕಾರಣಕ್ಕೆ ಎಲ್ಲೆಲ್ಲಿ ಬೇರೆ ದೇಶಗಳ ಹೆಸರು ಪ್ರಸ್ತಾಪ ಆಗುತ್ತದೋ, ಅದರಲ್ಲೂ ಮುಖ್ಯವಾಗಿ ಚೀನಾದ ಹೆಸರು ಪ್ರಸ್ತಾಪವಾದಾಗ ಭಾರತದ ಹೆಸರೂ ಪ್ರಸ್ತಾಪವಾಗುವಂತೆ ಮಾಡುವುದು ಈಗಿನ ಭಾರತದ ಯುವ ಸಮೂಹದ ಹೊಣೆಯಾಗಿದೆ. ಆ ಕೆಲಸವನ್ನು ನೀವು ಮಾಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

Make In India modi

1978 ರಿಂದ 2022 ರ ಅವಧಿಯಲ್ಲಿ, ಅಂದರೆ 44 ವರ್ಷಗಳ ಅವಧಿಯಲ್ಲಿ 6 ಬಾರಿ ಚೀನಾ ಭಾರತವನ್ನು ಹಿಂದಿಕ್ಕಿದೆ. ಆದರೆ ಇಲ್ಲಿ ಕುಳಿತಿರುವ ಅದ್ಭುತ ವ್ಯಕ್ತಿಗಳು ಕೆಲಸವನ್ನು ಮಾಡಲು ಬಯಸಿದರೆ ಚೀನಾಗೆ ಸಿಗುವ ಗೌರವ ಭಾರತಕ್ಕೆ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗ ನಾವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಈಗ ನಮ್ಮ ದೇಶಕ್ಕೆ ಒಂದು ಮಟ್ಟದ ಗೌರವ ಸಿಕ್ಕಿದೆ. 1991ರಲ್ಲಿ ಮನಮೋಹನ್‌ಸಿಂಗ್‌ ಹಣಕಾಸು ಸಚಿವರಾಗಿದ್ದಾಗ ಕೈಗೊಂಡ ಆರ್ಥಿಕ ಸುಧಾರಣಾ ನೀತಿಗಳು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಮೇಕ್‌ ಇನ್‌ ಇಂಡಿಯಾ ಮತ್ತು ಸ್ಟಾರ್ಟಪ್‌ ಇಂಡಿಯಾ ಯೋಜನೆಗಳಿಂದ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂದು ಮೂರ್ತಿ ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *