ಬೆಂಗಳೂರು: ವಿಮ್ಸ್ ಆಸ್ಪತ್ರೆಯಲ್ಲಿ(VIMS) ಮೂವರು ರೋಗಿಗಳು ದಾರುಣವಾಗಿ ಸಾವನ್ನಪ್ಪಿದ್ದು, ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಬಿಜೆಪಿ(BJP) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ(Bellay) ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳ(Patients) ಸಾವಿನ ಪ್ರಕರಣ ಕುರಿತಂತೆ ವಿಧಾನಸಭೆಯಲ್ಲಿ(Vidhana sabhe) ಮಾತನಾಡಿದ ಅವರು, ಜನರೇಟರ್ ಕೆಟ್ಟು, ಕರೆಂಟಿಲ್ಲದೇ ಐಸಿಯುನಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಆ ಆಸ್ಪತ್ರೆಯವರ ಬಳಿ ಹಣ ಇದೆ, ಜನರೇಟರ್ ವ್ಯವಸ್ಥೆ ಮಾಡಬಹುದಿತ್ತು. ಇದಕ್ಕೆ ಆಸ್ಪತ್ರೆಯವರು ಹೊಣೆಗಾರರಾ? ಸರ್ಕಾರ ಹೊಣೆನಾ? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಜವಾಬ್ದಾರಿ ಆರೋಗ್ಯ ಇಲಾಖೆ(Health Department) ಹೊರಬೇಕು. ಮೃತರ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ಕೊಡಿ. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕಿಡಿಕಾರಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ ಮೂರು ಸಾವು ಪ್ರಕರಣಕ್ಕೆ ಸರ್ಕಾರ ಕಾರಣ ಎಂಬ ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ(Madhuswamy), ಸಿದ್ದರಾಮಯ್ಯ ಅವರಿಂದ ಈ ಭಾಷೆ ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಆದ ಮರಣವನ್ನು ಸರ್ಕಾರಿ ಪ್ರಾಯೋಜಿತ ಕೊಲೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ
ಬಳ್ಳಾರಿ ವಿಮ್ಸ್ ಆಸ್ಪತ್ರೆ ಸಾವಿನ ವಿಚಾರವಾಗಿ ವಿಪಕ್ಷ ನಾಯಕರು ಪತ್ರ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಸರ್ಕಾರವೇ ಹೊಣೆ ಅಂತ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ಮರ್ಡರ್(Murder) ಅಂತ ಬಳಕೆ ಮಾಡಿದ್ದಾರೆ. ಪತ್ರ ಕೊಡುವಾಗ ನೋಡಿ ಕೊಡಬೇಕಿತ್ತು. ಅವರು ಸರ್ಕಾರ ನಡೆಸಿದ್ದಾರೆ, ನಾವೆಲ್ಲೂ ಅವರೇ ಮರ್ಡರ್ ಮಾಡಿದ್ದಾರೆ ಅಂತ ಯಾವತ್ತೂ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ನನ್ನ ಆರೋಗ್ಯ ಸ್ಥಿರವಾಗಿದೆ: ಆನಂದ್ ಮಾಮನಿ
ಕಿಡ್ನಿ ವೈಫಲ್ಯ ಒಂದು, ಹಾವು ಕಚ್ಚಿ ಮತ್ತೊಂದು ಸಾವಾಗಿದೆ. ವೆಂಟಿಲೇಟರ್ ಒಂದು ಆಸ್ಪತ್ರೆಯಲ್ಲಿ ಇದೆ ಅಂದರೆ ಅದಕ್ಕೆ ಬ್ಯಾಕ್‍ಅಪ್ ಇದ್ದೆ ಇರುತ್ತದೆ. ಸರ್ಕಾರದ ವರದಿ ತಪ್ಪಿದೆ ಅಂತಾದರೆ ತನಿಖೆ ಮಾಡಿ ವರದಿ ಕೊಡಿಸುತ್ತೇವೆ. ಆಸ್ಪತ್ರೆಯವರ ನಿರ್ಲಕ್ಷ್ಯ ಇದ್ದರೆ ಕ್ರಮ ತೆಗೆದುಕೊಳ್ಳುತೇವೆ. ನಮ್ಮ ತಪ್ಪಿದ್ದರೆ ಪರಿಹಾರದ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ಸದನದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು(Sriramulu), ಮುಲ್ಲಾ ಹುಸೇನ್ ಅನ್ನೋ ರೋಗಿ 11 ರಂದು ದಾಖಲಾಗಿರುತ್ತಾರೆ. 14 ರಂದು ಅವರು ಸಾವನ್ನಪ್ಪಿದ್ದಾರೆ. ಅವರಿಗೆ ಎರಡೂ ಕಿಡ್ನಿಗಳು ಹೋಗಿದ್ವು, ಬೇರೆ ಬೇರೆ ಕಾಯಿಲೆ ಇದ್ದವು. ಇದರಿಂದ ಮುಲ್ಲಾ ಹುಸೇನ್ ಸತ್ತಿದ್ದಾರೆ. ವಿಮ್ಸ್ ಡೈರೆಕ್ಟರ್ ಜೊತೆ ನಿನ್ನೆ ರಾತ್ರಿಯಿಂದ ಸಂಪರ್ಕದಲ್ಲಿದ್ದೇನೆ. ಕರೆಂಟ್ ಪದೇ, ಪದೇ ಹೋಗುತ್ತಿರುತ್ತದೆ ಅಂತ ಡೈರೆಕ್ಟರ್ ಹೇಳಿದ್ದಾರೆ. ಕರೆಂಟ್ ಹೋದಾಗ ಒಂದೂವರೆ ಗಂಟೆ ಜನರೇಟರ್ ಬ್ಯಾಕಪ್ ಇರುತ್ತದೆ. ರೋಗಿಗಳು ಸತ್ತಿದ್ದು ಕರೆಂಟ್ ಹೋಯಿತು, ಜನರೇಟರ್ ಇರಲಿಲ್ಲ ಎನ್ನುವ ಕಾರಣದಿಂದ ಅಲ್ಲ. ಆಸ್ಪತ್ರೆಯಲ್ಲಿ ಜನರೇಟರ್ ಬ್ಯಾಕ್ ಅಪ್ ಇದೆ. ಯಾವಾಗಲೂ ಬ್ಯಾಕ್ ಅಪ್ ಇರುತ್ತದೆ. ವಿಮ್ಸ್ ರೋಗಿಗಳ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಡೆದಿದ್ದೇನು..?: ಕಳೆದ ರಾತ್ರಿ ವಿಮ್ಸ್‍ನ ಹಳೆಯ ಕಟ್ಟಡದಲ್ಲಿರುವ ಐಸಿಯುವಿನಲ್ಲಿ ಮೂವರು ರೋಗಿಗಳು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬುಧವಾರ ರಾತ್ರಿ ಐಸಿಯುನಲ್ಲಿ(ICU) ವಿದ್ಯುತ್ ಸಂಪರ್ಕ ಕಟ್ ಆಗಿದೆ. ಬೆಳಗ್ಗೆವರೆಗೂ ಕರೆಂಟ್(Current) ಬಂದಿಲ್ಲ. ಇದರಿಂದ ಐಸಿಯುನಲ್ಲಿ ದಾಖಲಾಗಿದ್ದ ಬಳ್ಳಾರಿಯ ಚೆಟ್ಟೆಮ್ಮಾ, ಹುಸೇನ್ ಸೇರಿದಂತೆ ಮೂವರು ಸಾವಿಗೀಡಾಗಿದ್ದರು.
ಆಸ್ಪತ್ರೆ ನಿರ್ದೇಶಕರು ಹೇಳಿದ್ದೇನು..?: ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ವಿಮ್ಸ್ ನಿರ್ದೇಶಕ ಗಂಗಾಧರ್ ಗೌಡ, ರೋಗಿಗಳ ಸಾವು ಸಹಜವಾಗಿದೆ. ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿವೆ. ಒಬ್ಬ ರೋಗಿ ವಿಷಪೂರಿತ ಹಾವಿನ ಕಡಿತದಿಂದ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವಿಗೀಡಾಗಿದ್ದರೆ, ಇನ್ನೊಬ್ಬ ಮೃತರು ಬಹು ಅಂಗಾಗ ವೈಫಲ್ಯದಿಂದ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ, ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ. ಹಾಗೆಯೇ ಮತ್ತೊಬ್ಬ ರೋಗಿಯು ಹಲವಾರು ದಿನಗಳಿಂದ ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದು ಕೊನೆಗೆ ಬಹು ಅಂಗಾಗಳ ಸೋಂಕಿನಿಂದ ಸಹಜವಾಗಿ ಸಾವನ್ನಪ್ಪಿದ್ದಾರೆ. ಆದರೆ ವಿಮ್ಸ್ ಆಸ್ಪತ್ರೆಯು ಉನ್ನತ ಚಿಕಿತ್ಸಾ ಕೇಂದ್ರವಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಕೊನೆಗೆ ಪರಿಸ್ಥಿತಿ ಉಲ್ಬಣಗೊಂಡ ನಂತರ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವುದರಿಂದ ಸಾವುಗಳು ಆಗುವ ಸಂಭವನೀಯತೆ ಹೆಚ್ಚಾಗುತ್ತದೆ. ನಿನ್ನೆ ಬೆಳಗ್ಗೆ ಅದೇ ಸಮಯದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿರುವುದು ಕಾಕತಾಳೀಯವಾಗಿದೆ ಎಂದಿದ್ದಾರೆ.