ಹಾಸನ: ನಾಪತ್ತೆಯಾಗಿದ್ದ ಮಹಿಳೆ (Woman) ಮೂಳೆಗಳ ರೂಪದಲ್ಲಿ ಪತ್ತೆಯಾದ ಘಟನೆ ಹಾಸನದಲ್ಲಿ ನಡೆದಿದೆ.
ರತ್ನಮ್ಮ (55) ನಾಪತ್ತೆಯಾಗಿದ್ದ ಮಹಿಳೆ. ಈಕೆ ಹಾಸನ (Hassan) ತಾಲೂಕಿನ ನಾರಾಯಣಪುರ (Narayanapura) ಗ್ರಾಮದಿಂದ ಜು.20 ರಂದು ಕಾಣೆಯಾಗಿದ್ದರು. ಈ ಸಂಬಂಧ ರತ್ನಮ್ಮ ಪುತ್ರಿ ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಷ್ಟೇ ಹುಡುಕಾಟ ನಡೆಸಿದರೂ ರತ್ನಮ್ಮ ಸಿಕ್ಕಿರಲಿಲ್ಲ. ಆದರೆ ಸೋಮವಾರ ಸಂಜೆ ಜೋಳದ ಹೊಲದಲ್ಲಿ ರತ್ನಮ್ಮ ಉಟ್ಟಿದ್ದ ಸೀರೆ, ತಲೆ ಬುರುಡೆ, ಮೂಳೆಗಳು ಪತ್ತೆಯಾಗಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ
ಪೊಲೀಸರಿಗೆ ದೂರು ಕೊಟ್ಟರೂ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಎ.ಗುಡುಗನಹಳ್ಳಿ ಗ್ರಾಮದ ಮಹೇಶ್ ಎಂಬವರ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಚಿನ್ನ(Gold) ದ ಸರದ ಆಸೆಗೆ ರತ್ನಮ್ಮನನ್ನು ಮಹೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.
ಸ್ಥಳಕ್ಕೆ ಡಿವೈಎಸ್‍ಪಿ (DySP) ಉದಯ್ ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆ ಬುರುಡೆ, ಮೂಳೆಗಳನ್ನು ಸಂಗ್ರಹಿಸಿ ಹಾಸನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.