ಬಾಗಲಕೋಟೆ: ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದ ಯುವಕನನ್ನು ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಮಲ್ಲಮ್ಮ ನಗರದಲ್ಲಿ ನಡೆದಿದೆ.
ಮೃತ ಯುವಕನನ್ನು ಮೆಹಬೂಬ್(22) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮೆಹಬೂಬ್ ಅನ್ನು ಆತನ ಸ್ನೇಹಿತ ಭದ್ರೇಶ್ ಹತ್ಯೆಗೈದಿದ್ದಾನೆ. ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮೆಹಬೂಬ್, ಪ್ರತಿ ಹಬ್ಬದ ದಿನಗಳಲ್ಲಿ ರಜೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಊರಿಗೆ ಬರುತ್ತಿದ್ದನು. ಹೀಗೆ ಬಂದ ಮೆಹಬೂಬ್‍ನನ್ನು ಸ್ನೇಹಿತ ಭದ್ರೇಶ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇತ್ತ ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ.
ಕಳೆದ 5 ವರ್ಷದ ಹಿಂದೆ ಭದ್ರೇಶ್ ಮತ್ತು ಮೆಹಬೂಬ್ ನಡುವೆ ಸಣ್ಣ ಜಗಳವಾಗಿತ್ತು. ಇದೇ ಸೇಡು ಇಟ್ಟಕೊಂಡಿದ್ದ ಭದ್ರೇಶ್, ಮೊನ್ನೆ ರಾತ್ರಿ ಅಂಗನವಾಡಿ ಬಳಿ ಸ್ನೇಹಿತರೊಟ್ಟಿಗೆ ಕೂತಿದ್ದ ಮಹಬೂಬ್‍ಗೆ ಎದೆ, ಕುತ್ತಿಗೆ, ಹೊಟ್ಟೆ ಸೇರಿ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಕಲ್ಲು ಎತ್ತಿ ಹಾಕಿದ್ದಾನೆ. ಸದ್ಯ ಭದ್ರೇಶ್‍ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತ ಮೆಹಬೂಬ್ ಕುಟುಂಬಸ್ಥರು ಶವವನ್ನು ಮುಧೋಳ ನಗರದ ಬಸ್ ನಿಲ್ದಾಣದ ಬಳಿ ಇರಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಮೂಢನಂಬಿಕೆ ಇನ್ನೂ ಜೀವಂತ – ಸತ್ತ ಬಾಲಕನನ್ನು ಬದುಕಿಸಲು 8 ಗಂಟೆ ಉಪ್ಪಿನಲ್ಲಿಟ್ಟ ಗ್ರಾಮಸ್ಥರು
ಒಟ್ಟಾರೆ ಹಬ್ಬಕ್ಕೆಂದು ಊರಿಗೆ ಬಂದಿದ್ದವನನ್ನ ಸ್ನೇಹಿತನೇ ಕೊಲೆ ಮಾಡಿದ್ದು ನಿಜಕ್ಕೂ ಹೇಯ ಕೃತ್ಯ. ಹಳೇ ದ್ವೇಷಕ್ಕೆ ಜೀವವನ್ನೇ ಬಲಿ ಪಡೆದಿದ್ದು ನಿಜಕ್ಕೂ ದುರಂತವಾಗಿದೆ. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ