ಚೆನ್ನೈ: ತನ್ನ ಕುಟುಂಬ ವಿದೇಶಕ್ಕೆ ಹೋಗಬಾರದು, ಅವರನ್ನು ತಡೆಯಬೇಕು ಎಂಬ ಉದ್ದೇಶದಿಂದ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಬೆದರಿಕೆ ಒಡ್ಡಿದ್ದಾನೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ವ್ಯಕ್ತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಶನಿವಾರ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾನೆ. ತಕ್ಷಣ ಭದ್ರತಾ ಏಜೆನ್ಸಿಗಳು ವಿಮಾನದಲ್ಲಿ ಸಂಪೂರ್ಣ ತಪಾಸಣೆ ನಡೆಸಿ, ಅಂತಹ ಯಾವುದೇ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣವನ್ನೇ ಕದ್ದೊಯ್ದ ಕಳ್ಳರು!
ವರದಿಗಳ ಪ್ರಕಾರ ಇಂದು ಬೆಳಗ್ಗೆ 7:20ಕ್ಕೆ ಇಂಡಿಗೋ ವಿಮಾನ ಚೆನ್ನೈ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿತ್ತು. ಆದರೆ ಬಾಂಬ್ ಬೆದರಿಕೆಯ ಹಿನ್ನೆಲೆ ನಿರ್ಗಮನ ವಿಳಂಬವಾಗಿತ್ತು. ಬಳಿಕ ಸುಮಾರು 180 ಪ್ರಯಾಣಿಕರಿಗೆ ವಸತಿ ಒದಗಿಸಲಾಗಿದೆ.
ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪೊಲೀಸರು ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಬಳಿಕ ಆ ವ್ಯಕ್ತಿ ತನ್ನ ಕುಟುಂಬದವರು ವಿದೇಶಕ್ಕೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಈ ರೀತಿ ಹುಸಿ ಬಾಂಬ್ ಕರೆ ನೀಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ