ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕೋ ಗೊತ್ತಿಲ್ಲ. ರಸ್ತೆಯ ಗುಂಡಿಗಳನ್ನ ಮುಚ್ಚಿ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಬಿಬಿಎಂಪಿ ಮಾತ್ರ ಕಥೆಗಳನ್ನ ಹೇಳುತ್ತಾ ಅಮಾಯಕ ಜೀವಗಳನ್ನ ಬಲಿಪಡೆಯುತ್ತಲೇ ಇದೆ. ಬೆಂಗಳೂರಿನ ರಸ್ತೆ ಗುಂಡಿಗೆ ಈಗ ಮತ್ತೊಂದು ಬಲಿ ಸೇರ್ಪಡೆಯಾಗಿದೆ.
ಕಳೆದ 18ರಂದು ಮಧ್ಯಾಹ್ನ 12 ಗಂಟೆಗೆ ಸುಪ್ರೀತ್ ಎಂಬವರು ಬಸವೇಶ್ವರ ನಗರದಲ್ಲಿನ ಕಾಲೇಜಿಗೆ ತಮ್ಮ ಮಗಳನ್ನ ಬಿಟ್ಟು ಬರುವಾಗ ರಸ್ತೆ ಗುಂಡಿಯಿಂದಾಗಿ ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದ್ದರು. ತಲೆಗೆ ಗಂಭೀರ ಗಾಯವಾಗಿ ಹೇರೋಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ದುಡಿಯುತ್ತಿದ್ದವರೇ ಈ ಮೃತ ಸುಪ್ರೀತ್. ಲೋನ್ ಮೇಲೆ ಮನೆ ಖರೀದಿಸಿದ್ರು. ಇಬ್ಬರು ಮಕ್ಕಳನ್ನ ಓದಿಸುತ್ತಿದ್ರು. ಆದರೆ ಇದೀಗ ಈ ಕುಟುಂಬಕ್ಕೆ ಬದುಕೇ ಕತ್ತಲಾದಂತೆ ಆಗಿದೆ. ಪತ್ನಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈಗ ಮನೆಯ ಆಧಾರ ಸ್ಥಂಭವನ್ನೇ ಕಳೆದುಕೊಂಡು ಕಣ್ಣೀರಾಕುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ಬಿಬಿಎಂಪಿ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ. ನಮ್ಮ ಅಣ್ಣನ ಸಾವಿಗೆ ಬಿಬಿಎಂಪಿ ನೇರ ಹೊಣೆ ಎಂದು ಸುಪ್ರೀತ್ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಬಲವಂತವಾಗಿ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ: ದಿಗ್ವಿಜಯ ಸಿಂಗ್
ರಸ್ತೆಯಲ್ಲಿನ ಗುಂಡಿಯಿಂದ ಅಮಾಯಕನ ಸಾವಾಗಿದೆ. ಈ ಸಾವಿನಿಂದ ಆ ಕುಟುಂಬದ ಭವಿಷ್ಯ ಮಂಕಾಗಿದೆ. ಪತ್ನಿಯ ಗತಿಯೇನು, ಮಕ್ಕಳ ವಿದ್ಯಾಭ್ಯಾಸದ ಭವಿಷ್ಯವೇನು ಎಂದು ಕುಟುಂಬ ಚಿಂತಿಸುತ್ತಿದೆ. ಬಿಬಿಎಂಪಿ ಬೇಜವಾಬ್ದಾರಿಗೆ ಇನ್ನೆಷ್ಟು ಬಲಿ ಬೇಕು. ನಾನೇ ಗುಂಡಿಯಿಂದಲೇ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಮೂರ್ನಾಲ್ಕು ಮಂದಿಯನ್ನ ನಮ್ಮ ಸಂಭಾಂಗಣದಲ್ಲೇ ನೋಡಿದ್ದೇನೆ. ಇದೇ ರೀತಿ ಕಳಪೆ ಕಾಮಗಾರಿಗಳನ್ನ ಮಾಡಿ ಮತ್ತಷ್ಟು ಅಮಾಯಕರನ್ನ ಕೊಲ್ಲಬೇಡಿ ಎಂದು ಕ್ರೈಸ್ತ ಗುರು ಮೋಸಸ್ ಪ್ರಭಾಕರ್ ಮನವಿ ಮಾಡಿದರು.
ಒಟ್ಟಾರೆ ರಸ್ತೆಗುಂಡಿಗೆ ಸರಣಿ ಬಲಿಗಳು ಆಗುತ್ತಲೇ ಇದೆ. ನಾವು ಗುಂಡಿ ಮುಚ್ಚೇ ಬಿಟ್ವಿ ಅಂತ ಸಬೂಬು ಹೇಳುತ್ತಲೇ ಅಮಾಯಕರ ಪ್ರಾಣವನ್ನ ಬಿಬಿಎಂಪಿ ತೆಗಯುತ್ತಿದೆ. ಬಿಬಿಎಂಪಿ ವಿರುದ್ಧ ನಾವು ಕನೂನು ಹೋರಾಟ ಮಾಡ್ತೀವಿ ಅಂತ ಕುಟುಂಬದವರು ಎಚ್ಚರಿಕೆ ಕೊಟ್ಟಿದ್ದಾರೆ.