ಇನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದೆ. ಇಂದು ಸಂಜೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್, ಸೀರಿಯಲ್ ನಿಂದ ಅನಿರುದ್ಧ ಅವರನ್ನು ಕೈ ಬಿಡುವ ವಿಚಾರವಾಗಿ ವಾಹಿನಿಯು ಕೂಡ ಒಪ್ಪಿಕೊಂಡಿದ್ದು, ಇನ್ಮುಂದೆ ನಮ್ಮ ಧಾರಾವಾಹಿಯಲ್ಲಿ ಅನಿರುದ್ದ ಅವರು ನಟಿಸುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಚಾನೆಲ್ ಮತ್ತು ಧಾರಾವಾಹಿ ತಂಡ ಒಪ್ಪಿದರೆ, ನಾನು ನಟಿಸಲು ಸಿದ್ಧವೆಂದು ಕೆಲ ಗಂಟೆಗಳ ಹಿಂದೆಯಷ್ಟೇ ಅನಿರುದ್ಧ ಮಾತನಾಡಿದ್ದರು. ಆದರೆ, ಈ ಮಾತಿಗೆ ವಾಹಿನಿಯಾಗಲಿ, ಧಾರಾವಾಹಿ ತಂಡವಾಗಲಿ ಮನ್ನಣೆ ನೀಡಿಲ್ಲ. ಧಾರಾವಾಹಿಯಿಂದ ಅವರನ್ನು ತಗೆದು ಹಾಕುವಂತಹ ಅಂತಿಮ ತೀರ್ಮಾನವನ್ನೇ ತಗೆದುಕೊಂಡಿದೆ. ಹಾಗಾಗಿ ಆರ್ಯವರ್ಧನ್ ಪಾತ್ರಧಾರಿ ಮುಂದಿನ ದಿನಗಳಲ್ಲಿ ಬದಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಪಂಚಾಯಿತಿ ನಡೆಯುವುದಿಲ್ಲವೆಂದೂ ಆರೂರು ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ ಮತ್ತೆ ಅನಿರುದ್ಧ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಜಗದೀಶ್, ‘ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಹೆಚ್ಚು ಹಣಕ್ಕೆ ಒತ್ತಡ ಮಾಡಿದ್ರು. ಮಹಾ ಸಂಗಮ ಎಪಿಸೋಡ್ ನಲ್ಲಿ ದೊಡ್ಡಮಟ್ಟದ ಗಲಾಟೆ ಮಾಡಿದ್ರು. ಪ್ರತಿ ಗಲಾಟೆ ಆದಾಗಲೂ ಚಾನಲ್ ಗೆ ನಾನು ಗಮನಕ್ಕೆ ತಂದಿದ್ದೇನೆ. ನನಗೆ ಸಾಕಾಗಿ ಇನ್ನು ನಾನು ಆರೋಗ್ಯ ಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಡುವ ನಿರ್ಧಾರ ಮಾಡಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್, ಹಿರಿಯ ನಟ ಸಿಹಿಕಹಿ ಚಂದ್ರು, ವಾಹಿನಿಯ ಪ್ರತಿನಿಧಿ ಸುಧೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಪ್ರಕರಣವು ಈ ರೀತಿಯಲ್ಲಿ ತೊಂದರೆ ಕೊಡುವವರಿಗೆ ಮಾದರಿಯಾಗಲಿ ಎಂದರು ಸಂಘದ ಅಧ್ಯಕ್ಷ ಭಾಸ್ಕರ್.