ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದೆ. ಅದರಲ್ಲೂ ನಟ ಅನಿರುದ್ಧ ಅವರ ವೃತ್ತಿ ಬದುಕಿಗೆ ದೊಡ್ಡದೊಂದು ಬ್ರೇಕ್ ನೀಡಿರುವ ಧಾರಾವಾಹಿ ಕೂಡ ಇದಾಗಿದೆ. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿರುವ ಅನಿರುದ‍್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರ ನಡುವಿನ ಜಗಳ ಇದೀಗ ತಾರಕಕ್ಕೇರಿದೆ.
ಅನಿರುದ್ಧ ಅವರ ವರ್ತನೆಯಿಂದ ತಮಗೆ ನೋವಾಗಿದೆ ಮತ್ತು ಅಪಾರ ನಷ್ಟವಾಗಿದೆ ಎನ್ನುವ ಕಾರಣವನ್ನು ಕೊಟ್ಟು ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಹಾಕಲಾಗಿದೆ. ಅಲ್ಲದೇ, ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ ಅವರಿಗೆ ಧಾರಾವಾಹಿ ಮತ್ತು ರಿಯಾಲಿಟಿ ಶೋ ನಲ್ಲಿ ಅವಕಾಶ ನೀಡಬಾರದು ಎಂದು ವಾಹಿನಿಗಳ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡಿದೆ. ಹೀಗಾಗಿ ಅನಿರುದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ತಮ್ಮನ್ನು ಕಿರುತೆರೆಯಿಂದ ಬ್ಯಾನ್ ಮಾಡಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಮಾಧ್ಯಮಗಳ ಜೊತೆ ಮಾತನಾಡಿರುವ ಅನಿರುದ್ಧ, ನಿರ್ಮಾಪಕರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಸಣ್ಣಪುಟ್ಟ ಮನಸ್ತಾಪಗಳು ಆಗಿದ್ದು ನಿಜ. ಅದನ್ನು ನಾವಾಗಿಯೇ ಸರಿ ಮಾಡಿಕೊಳ್ಳಬೇಕಿತ್ತು. ಇಷ್ಟು ದೊಡ್ಡದು ಮಾಡಬಾರದು. ನಾನು ಈಗಲೂ ಧಾರಾವಾಹಿಯ ಶೂಟಿಂಗ್‌ಗೆ ಹೋಗಲು ರೆಡಿ ಇದ್ದೇನೆ. ಅವರೊಂದಿಗೆ ಮಾತನಾಡಲೂ ತಯಾರಿದ್ದೇನೆ. ಆದರೆ, ನಿರ್ಮಾಪಕ ಜಗದೀಶ್ ಆಗಲಿ, ವಾಹಿನಿಯ ಮುಖ್ಯಸ್ಥರಾಗಲಿ ನನ್ನ ಕರೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಮತ್ತೆ ತಾವು ನಟಿಸಲು ರೆಡಿ ಇರುವುದಾಗಿ ತಿಳಿಸಿದ್ದಾರೆ.