ಕ್ರೇಜಿಸ್ಟರ್ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಸಮಾರಂಭ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಒಟ್ಟು ಮೂರು ದಿನಗಳ ಕಾಲ ನಾನಾ ಶುಭ ಕಾರ್ಯಗಳನ್ನು ಕುಟುಂಬ ಹಮ್ಮಿಕೊಂಡಿದೆ. ಇವತ್ತು ಈಗಾಗಲೇ ಅರಿಶಿನ ಮತ್ತು ಮೆಹಂದಿ ಶಾಸ್ತ್ರಗಳು ಮುಗಿದಿದ್ದು, ಸಂಜೆ ವಧುವಿನ ಕಡೆಯಿಂದ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಪ್ತರಿಗಷ್ಟೇ ಇದಕ್ಕೆ ಆಹ್ವಾನ ನೀಡಲಾಗಿದೆ.
ಆಗಸ್ಟ್ 21 ರಂದು ಮದುವೆ ಶಾಸ್ತ್ರಗಳು ನಡೆಯಲಿದ್ದು, ಮನೋರಂಜನ್ ಮತ್ತು ಸಂಗೀತಾ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ನವದಂಪತಿಗಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ವೈಟ್ ಪೆಟಲ್ಸ್ ತ್ರಿಪುರವಾಸಿನಿ ಸಿದ್ಧಗೊಂಡಿದೆ. ಮದುವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ಸಿನಿಮಾ ರಂಗದ ಗಣ್ಯರು ಕೂಡ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಆಗಸ್ಟ್ 22 ರಂದು ಮನೋರಂಜನ್ ಕಡೆಯಿಂದ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಿನಿಮಾ ರಂಗದ ಗೆಳೆಯರು, ರವಿಚಂದ್ರನ್ ಅವರ ಆಪ್ತರು ಹಾಗೂ ನಾನಾ ಸಿನಿಮಾ ರಂಗದ ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದ ರವಿಚಂದ್ರನ್, ಮಗನ ಮದುವೆಯನ್ನು ಸರಳವಾಗಿ ಮಾಡುತ್ತಿರುವುದರಿಂದ ಕುಟುಂಬಸ್ಥರಿಗೆ ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.