ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಿನ್ನೆ ಭೇಟಿ ಮಾಡಿ, ತಮ್ಮ ಹಿರಿಯ ಪುತ್ರ ಮನೋರಂಜನ್ ಮದುವೆಗೆ ಆಹ್ವಾನಿಸಿದ್ದಾರೆ ನಟ ರವಿಚಂದ್ರನ್. ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾದ ರವಿಚಂದ್ರನ್, ಬೆಂಗಳೂರಿನಲ್ಲಿ ನಡೆಯಲಿರುವ ಮದುವೆಗೆ ಕುಟುಂಬ ಸಮೇತ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.
ಇದೇ ಆಗಸ್ಟ್ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮನೋರಂಜನ್ ಮತ್ತು ಸಂಗೀತಾ ಜೋಡಿಯ ವಿವಾಹ ನಡೆಯಲಿದ್ದು, ಈಗಾಗಲೇ ಚಿತ್ರೋದ್ಯಮದ ಹಲವರಿಗೆ ರವಿಚಂದ್ರನ್ ಮದುವೆ ಆಹ್ವಾನ ನೀಡಿದ್ದಾರೆ. ಅಲ್ಲದೇ, ರಾಜಕೀಯ ಮುಖಂಡರಿಗೂ ಆಮಂತ್ರಣ ನೀಡಿದ್ದಾರೆ. ಮನರೋಜನ್ ಹಿರಿಯ ಮಗ ಆಗಿರುವ ಕಾರಣದಿಂದಾಗಿ ಅದ್ಧೂರಿಯಾಗಿಯೇ ಮಗನ ಮದುವೆಯನ್ನು ಮಾಡುತ್ತಿದ್ದಾರೆ ಕ್ರೇಜಿಸ್ಟಾರ್. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಎರಡು ವರ್ಷಗಳ ಹಿಂದೆ ಮಗಳ ಮದುವೆಯನ್ನೂ ವಿಶೇಷವಾಗಿ ರೂಪಿಸಿದ್ದರು ರವಿಚಂದ್ರನ್. ಮದುವೆಗೊಂದು ಥೀಮ್, ಸೆಟ್ ಹಾಗೂ ಸಿನಿಮಾ ರೀತಿಯಲ್ಲೇ ಚಿತ್ರೀಕರಣಕ್ಕೂ ಅವಕಾಶವಾಗುವಂತೆ ಮದುವೆ ಮಂಟಪವನ್ನು ತಯಾರಿಸಿದ್ದರು. ಅಲ್ಲದೇ, ಆಹ್ವಾನ ಪತ್ರಿಕೆಯನ್ನೂ ಅವರು ವಿಭಿನ್ನವಾಗಿಯೇ ಮುದ್ರಿಸಿದ್ದರು. ಮಗನ ಮದುವೆ ಕೂಡ ಹಾಗೆಯೇ ಇರಲಿದೆ.