ತೈಲ ಬೆಲೆ ಏರಿಕೆಯಿಂದ ಸೌದಿ ಅರಾಮ್ಕೋಗೆ ಭಾರೀ ಲಾಭ

Public TV
2 Min Read
Saudi aramco oil

ರಿಯಾದ್‌: ಉಕ್ರೇನ್‌ ರಷ್ಯಾ ಯುದ್ಧದಿಂದಾಗಿ ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋಗೆ ಭರ್ಜರಿ ಲಾಭವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಅರಾಮ್ಕೋ ಕಂಪನಿಯ ನಿವ್ವಳ ಆದಾಯ 48.4 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ನಿವ್ವಳ ಆದಾಯ ಶೇ.25.5 ಶತಕೋಟಿ ಡಾಲರ್‌ ಇತ್ತು. ಈ ಬಾರಿ ಶೇ.90 ರಷ್ಟು ಏರಿಕೆಯಾಗಿ ಇತಿಹಾಸ ಸೃಷ್ಟಿಸಿದೆ.

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಮಾಡಿದ ಕಂಪನಿಗಳ ಪೈಕಿ ತ್ರೈಮಾಸಿಕದಲ್ಲಿ ಸೌದಿ ಅರಾಮ್ಕೋ ಅತಿ ಹೆಚ್ಚು ಲಾಭ ಮಾಡಿದ ಕಂಪನಿ ಎಂದು ಬ್ಲೂಮ್‌ಬರ್ಗ್‌ ಹೇಳಿದೆ. ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

crude oil

ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ಉಕ್ರೇನ್‌ ಮೇಲಿನ ದಾಳಿಯಿಂದಾಗಿ ಈಗ ಸೌದಿಯಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿದೆ. ಕೋವಿಡ್‌ ಕಡಿಮೆಯಾದ ಬಳಿಕ ತೈಲ ಬೆಲೆ ನಿಧಾನವಾಗಿ ಏರಲು ಆರಂಭವಾಗಿತ್ತು. ಈ ಮಧ್ಯೆ ಯುದ್ಧದಿಂದಾಗಿ ಬೇಡಿಕೆ ಜಾಸ್ತಿಯಾಗಿ ತೈಲ ಬೆಲೆ ಗಗನಕ್ಕೆ ಏರಿತ್ತು.

ಒಪೆಕ್‌ ದೇಶಗಳ ಪೈಕಿ ಸೌದಿ ಅರೆಬಿಯಾ ಅತಿ ದೊಡ್ಡ ತೈಲ ಉತ್ಪಾದನಾ ದೇಶವಾಗಿದೆ. ವಿಶ್ವದ ಹಲವು ದೇಶಗಳು ಮನವಿಯ ಹಿನ್ನೆಲೆಯಲ್ಲಿ ಕಳೆದ ವಾರ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿವೆ.

ಸೌದಿ ಅರಾಮ್ಕೋ ಅಲ್ಲದೇ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಗಳಾದ ಎಕ್ಸನ್‌ಮೊಬಿಲ್‌, ಶೆವ್ರಾನ್‌ ಮತ್ತು ಬಿಪಿ ಕಂಪನಿಗಳು ಕಚ್ಚಾ ತೈಲ ಬೆಲೆ ಏರಿಕೆಯಿಂದ ಲಾಭ ಮಾಡಿಕೊಂಡಿವೆ.

crude oil well petrol

ಸರ್ಕಾರಿ ಸಿಬ್ಬಂದಿ ವೇತನ, ಸಬ್ಸಿಡಿ, ಇತರ ಅಭಿವೃದ್ಧಿ ಕೆಲಸಗಳಿಗೆ ತೈಲ ಮತ್ತು ಅನಿಲ ಮಾರಾಟದ ಮೇಲೆ ಸೌದಿ ಅರೇಬಿಯಾ ಹೆಚ್ಚು ಅವಲಂಬಿತವಾಗಿದೆ. ರಷ್ಯಾ ಈಗ ಕಡಿಮೆ ಬೆಲೆಯಲ್ಲಿ ತೈಲ ನೀಡುವ ಆಫರ್‌ ನೀಡಿದ್ದರೂ ಪ್ರಸ್ತುತ 1 ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲ 100 ಡಾಲರ್‌ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಪ್ರಸ್ತುತ ಈಗ ಸೌದಿ ಅರೇಬಿಯಾ ಪ್ರತಿ ದಿನ 10 ದಶಲಕ್ಷ ಬ್ಯಾರೆಲ್‌ ತೈಲವನ್ನು ಉತ್ಪಾದಿಸುತ್ತಿದೆ. ಪ್ರತಿ ದಿನ 13 ದಶಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಮಾಡುವ ಸಾಮರ್ಥ್ಯ ನಮಗಿದೆ. ಮುಂದಿನ ದಿನಗಳಲ್ಲಿ ಈ ಗರಿಷ್ಠ ಪ್ರಮಾಣವನ್ನು ನಾವು ತಲುಪಲಿದ್ದೇವೆ ಎಂದು ಸೌದಿ ಕಿಂಗ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಹಿಂದೆ ಪ್ರಕಟಿಸಿದ್ದರು.

ಮೂರು ವರ್ಷದ ಹಿಂದೆ ಸೌದಿ ಅರಾಮ್ಕೋ ಐಪಿಒ ಬಿಡುಗಡೆ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಲಾಭ ಬಂದ ಹಿನ್ನೆಲೆಯಲ್ಲಿ ಷೇರುದಾರರಿಗೆ 18.8 ಶತಕೋಟಿ ಡಾಲರ್‌ ಡಿವಿಡೆಂಡ್‌ ನೀಡಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಸೌದಿ ಅರಾಮ್ಕೋ ಕಂಪನಿಯಲ್ಲಿ ಸರ್ಕಾರವೇ ಶೇ.98 ರಷ್ಟು ಷೇರನ್ನು ಹೊಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *