ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯದಲ್ಲೂ ಸಕಲ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಲ್ಲಿ, ಸರ್ಕಾರಿ, ಖಾಸಗಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಈಗಾಗಲೇ ಧ್ವಜ ಮಾರಾಟ, ವಿತರಣೆ ಕಾರ್ಯ ಬಹುತೇಕ ಮುಗಿದಿದೆ. ಇಂದಿನಿಂದ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣ ಆಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನಗಳಂದು ಪ್ರತಿ ದಿನ ಬೆಳಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಹಾಗೂ ಮನೆಗಳಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣ ಮಾಡಿ 15ರವರೆಗೆ ಇರಿಸಬಹುದಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್‌ಎಸ್‌ಎಸ್
Every Indian has a special bond with the Tiranga. Gave the Tiranga to my young friends earlier today. The smile on their faces says it all! pic.twitter.com/I7cKCJYeg6
— Narendra Modi (@narendramodi) August 11, 2022
ಹರ್ ಘರ್ ತಿರಂಗಾ ಯಶಸ್ವಿಗೊಳಿಸುವ ಸಂಬಂಧ ಮುಖ್ಯಮಂತ್ರಿಗಳು ಹಲವು ಸುತ್ತಿನ ಸಭೆಗಳನ್ನು ನಡೆಸಿ ಎಲ್ಲ ಜಿಲ್ಲಾಡಳಿತಗಳಿಗೂ ಅಗತ್ಯ ಸೂಚನೆ ನೀಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಗಳು ರಾಜ್ಯದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ. ಬೆಂಗಳೂರಿನಲ್ಲಿಂದು ಬೆಳಗ್ಗೆಯಿಂದಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಸಚಿವರು, ಸಂಸದರು, ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ ಮತ್ತು ಬೈಕ್ ರ‍್ಯಾಲಿಗಳನ್ನು ನಡೆಸಲಾಗುತ್ತದೆ. ಜಿಲ್ಲೆಗಳಲ್ಲೂ ತಿರಂಗಾ ಯಾತ್ರೆಗಳನ್ನು ಕೈಗೊಳ್ಳಲಾಗುತ್ತದೆ.