ನವದೆಹಲಿ: 5ಜಿ ನೆಟ್‌ವರ್ಕ್ ಹರಾಜು ಪ್ರಕ್ರಿಯೆ ಮುಗಿದು ಇದೀಗ ಟೆಲಿಕಾಂ ಕಂಪನಿಗಳು ರೋಲ್‌ಔಟ್ ಸ್ಪರ್ಧೆಗೆ ಇಳಿದಿವೆ. ಈಗಾಗಲೇ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಈ ತಿಂಗಳ ಒಳಗಾಗಿಯೇ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿವೆ.
ಆಗಸ್ಟ್ 15ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲಿದ್ದು, ಜಿಯೋ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಿಹಿ ಗಳಿಗೆಯಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..
ಇದರ ನಡುವೆಯೇ ಭಾರ್ತಿ ಏರ್‌ಟೆಲ್ ಕೂಡಾ ಆಗಸ್ಟ್ ಅಂತ್ಯದ ವೇಳೆಗೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಆಗಸ್ಟ್ ತಿಂಗಳಿನಲ್ಲಿಯೇ 5ಜಿ ಯೋಜನೆಯನ್ನು ಪ್ರಾರಂಭಿಸಲು ಎರಿಕ್ಸನ್, ನೋಕಿಯಾ ಹಾಗೂ ಸ್ಯಾಮ್‌ಸಂಗ್ ಕಂಪನಿಗಳೊಂದಿಗೆ 5ಜಿ ನೆಟ್‌ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಏರ್‌ಟೆಲ್ ಘೋಷಿಸಿದೆ.
ಕಳೆದ ವಾರ ಟೆಲಿಕಾಂ ಇಲಾಖೆ ನಡೆಸಿದ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವಿಐ(ವೊಡಾಫೋನ್ ಐಡಿಯಾ), ಹಾಗೂ ಅದಾನಿ ಎಂಟರ್‌ಪ್ರೈಸಸ್‌ಗಳು ಭಾಗವಹಿಸಿದ್ದವು. ಜುಲೈ 26ರಂದು ಪ್ರಾರಂಭವಾಗಿದ್ದ ಹರಾಜು ಪ್ರಕ್ರಿಯೆ ಆಗಸ್ಟ್ 1 ರಂದು ಮುಕ್ತಾಯಗೊಂಡು, ಒಟ್ಟು ಬಿಡ್ ಮೊತ್ತ 1.5 ಲಕ್ಷ ಕೋಟಿ ರೂ. ತಲುಪಿತ್ತು. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?
ಹರಾಜಿನಲ್ಲಿ ರಿಲಯನ್ಸ್ ಜಿಯೋ 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ 5ಜಿ ಸ್ಪೆಕ್ಟ್ರಂ ಖರೀದಿಸಿದೆ. ಏರ್‌ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಸ್ಪೆಕ್ಟ್ರಂನಲ್ಲಿ 19867.8 MHz ಸ್ಪೆಕ್ಟ್ರಂ ಅನ್ನು ಬಿಡ್ ಮಾಡಿ ಖರೀದಿಸಿದೆ.