ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಪ್ರಕರಣ ಇತರೆ ಆರೋಪಿಗಳಾದ ಆಂಜನೇಯ ಹನುಮಂತಯ್ಯ, ಸಚಿನ್ ನಾರಾಯಣ, ಸುನಿಲ್ ಶರ್ಮಾ ಮತ್ತು ರಾಜೇಂದ್ರಗೂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿತು. ಪ್ರತಿ ಆರೋಪಿಯೂ ತಲಾ ಒಂದು ಲಕ್ಷ ಶ್ಯೂರಿಟಿ ನೀಡಬೇಕು. ಅನುಮತಿ ಇಲ್ಲದೇ ವಿದೇಶ ಪ್ರವಾಸ ಮಾಡಬಾರದು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರೆ ಆರೋಪಿಗಳ ವಿರುದ್ಧ ದೂರು ದಾಖಲಿಸಿರುವ ಇಡಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಜಾರ್ಜ್‍ಶೀಟ್ ಸಲ್ಲಿಕೆ ಹಿನ್ನೆಲೆ ಹೈಕೋರ್ಟ್‍ನಿಂದ ಪಡೆದ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಾಗಿ ಪರಿವರ್ತಿಸಲು ಡಿ.ಕೆ. ಶಿವಕುಮಾರ್ ಮತ್ತು ಹೊಸದಾಗಿ ಜಾಮೀನು ನೀಡುವಂತೆ ಇತರೆ ಆರೋಪಿಗಳು ಕೋರ್ಟ್‍ಗೆ ಮನವಿ ಮಾಡಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಇಡಿ ಪರ ವಕೀಲರು, ಬೇಲ್ ಕೊಡುವುದು, ಬಿಡುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು, ಆದರೆ ಬೇಲ್ ಕೊಡುವ ಪೂರ್ವದಲ್ಲಿ ಪಿಎಂಎಲ್‍ಎ ಕಾಯ್ದೆಯ ಸೆಕ್ಷನ್ 45ರ ಎರಡು ಷರತ್ತು ಪಾಲನೆಯಾಬೇಕು. ಆರೋಪಿ (ಡಿಕೆಶಿ) ಹಣಕಾಸು ಅವ್ಯವಹಾರ ಮಾಡಿಲ್ಲ ಅನ್ನೋದು ಮೇಲ್ನೋಟಕ್ಕೆ ದೃಢವಾಗಬೇಕು, ಇಲ್ಲವಾದಲ್ಲಿ ಬೇಲ್ ನೀಡಬಾರದು.
ಎರಡನೇಯದಾಗಿ ಬೇಲ್ ಸಿಕ್ಕ ನಂತರ ಇದೇ ತರಹದ ಇನ್ನೊಂದು ಅಪರಾಧ ಮಾಡುವುದಿಲ್ಲ ಎನ್ನುವುದನ್ನು ಕೋರ್ಟ್ ಕಂಡುಕೊಳ್ಳಬೇಕು. ಇತ್ತಿಚೇಗಿನ ಸುಪ್ರೀಂಕೋರ್ಟ್ ಕೂಡ ಟ್ವಿನ್ ಕಂಡಿಷನ್ ನ್ಯಾಯಾಲಯಕ್ಕೆ ತೃಪ್ತಿಯಾದಲ್ಲಿ ಬೇಲ್ ನೀಡಬಹುದು ಎಂದು ತೀರ್ಪು ನೀಡಿದೆ. ಪ್ರಕರಣವೊಂದನ್ನು ಮೇಲ್ನೋಟಕ್ಕೆ ಪರಿಶೀಲನೆ ಮಾಡಿ, ಚಾರ್ಜ್‍ಶೀಟ್ ಸಲ್ಲಿಕೆ ನಂತರ ಅಪರಾಧ ಎಸಗುವ ಸಾಧ್ಯತೆ ಕಡಿಮೆ ಎಂದರೆ ಬೇಲ್ ನೀಡಲು ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಪರಾಧ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಬೇಲ್ ನೀಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಆ.10 ರಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ
ಇದಕ್ಕೆ ಡಿಕೆಶಿ ಮತ್ತು ಇತರೆ ಆರೋಪಿಗಳ ಪರ ವಾದ ಮಂಡಿಸಿದ್ದ ವಕೀಲರು, ಸುಪ್ರೀಂಕೋರ್ಟ್ ನ್ಯಾ. ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಪಿಎಂಎಲ್‍ಎ ಕಾಯ್ದೆ ಎಲ್ಲಾ ಪ್ರಾವಿಷನ್‍ಗಳ ಮೇಲೆ ಚರ್ಚೆಯಾಗಿತ್ತು. ಕೇವಲ ಸೆಕ್ಷನ್ 45ರ ಬಗ್ಗೆ ಅಲ್ಲ, ಅಂತಿಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ಬಗ್ಗೆ ಸ್ಪಷ್ಟ ತೀರ್ಪು ನೀಡಿದ್ದನ್ನು ಪರಿಗಣಿಸಬೇಕು. ಎಲ್ಲಾ ಐಪಿಸಿ ಅಥವಾ ಬೇರೆ ಮಾದರಿಯ ಅಪರಾಧ ಆಗಿರಲಿ ಯಾವ ಹಂತದಲ್ಲಿ ಆರೋಪಿಗಳಿಗೆ ಬೇಲ್ ನೀಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಪಿಎಂಎಲ್‍ಎ ಕೇಸ್‍ನಲ್ಲಿ ಆರೋಪಿ ತನಿಖೆ ಹಂತದಲ್ಲಿ ಬಂಧನವಾಗಿ ನಂತರ ಜಾಮೀನು ಸಿಕ್ಕಿದ್ದರೆ ಚಾರ್ಜ್‍ಶೀಟ್ ಸಲ್ಲಿಕೆ ಬಳಿಕ ಬಂಧಿಸುವುದರಲ್ಲಿ ಯಾವುದೇ ಲಾಜಿಕ್ ಇಲ್ಲ, ಚಾರ್ಜ್‍ಶೀಟ್ ಸಲ್ಲಿಕೆ ಸಂದರ್ಭದಲ್ಲಿ ಬಂಧನವಾಗಿಲ್ಲದಿದ್ದರೆ ಚಾರ್ಜ್‍ಶೀಟ್ ಆದ ಮೇಲೂ ಬಂಧಿಸಬಾರದು. ಬಂಧಿಸಿದರೆ ಅದು ಪ್ಯುನಿಟಿವ್ ಪನಿಶ್‍ಮೆಂಟ್ ಆಗುತ್ತದೆ ಎಂದು ವಾದಿಸಿದ್ದರು.
ಕೋರ್ಟ್ ಆದೇಶದ ಬಳಿಕ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ನ್ಯಾಯ ಸಿಗುವ ವಿಶ್ವಾಸ ಇತ್ತು, ಸಿಕ್ಕಿದೆ. ಕೃಷಿ, ವ್ಯವಹಾರ, ರಾಜಕೀಯ ಮಾಡಿಕೊಂಡು ಇದ್ದವರು ನಾವು. ಗುಜರಾತ್ ರಾಜ್ಯಸಭಾ ಚುನಾವಣೆ ಬಳಿ ಐಟಿ ದಾಳಿ ಆಗಿತ್ತು. ಐಟಿ ದಾಳಿ ಆಗಿ ಐದು ವರ್ಷ ಆಗಿದೆ. ನನಗಿಂತ ಹೆಚ್ಚು ನನ್ನ ಜೊತೆ ಇದ್ದ ಸಹಪಾಠಿಗಳ ಯೋಚನೆ ಆಗಿತ್ತು. ಅವರಿಗೂ ಜಾಮೀನು ಸಿಕ್ಕಿರುವುದು ಹೆಚ್ಚು ಸಂತೋಷ ತಂದಿದೆ ಎಂದರು. ಇದನ್ನೂ ಓದಿ: ಮನೆಯಲ್ಲಿ ಸಿಕ್ಕಿದ ಹಣ ನನಗೆ ಸೇರಿದ್ದಲ್ಲ, ಯಾರೋ ಅಲ್ಲಿ ಇಟ್ಟಿದ್ದಾರೆ: ಅರ್ಪಿತಾ ಮುಖರ್ಜಿ