ಮಂಗಳೂರು: ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಗಂಭೀರ ಪ್ರಕರಣದಲ್ಲಿ ಆರೋಪಿಗಳಾಗಿರುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸುರತ್ಕಲ್‌ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿ, ಇಂದು ಫಾಝಿಲ್ ಅಂತ್ಯಕ್ರಿಯೆ ನಡೆದಿದೆ. ಶುಕ್ರವಾರದ ಪ್ರಾರ್ಥನೆ ಬಳಿಕ ತನಿಖೆ ಮುಂದುವರೆಸುತ್ತೇವೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ಎಲ್ಲಾ ಚೆಕ್ ಮಾಡುತ್ತೇವೆ. ಹಂತಕರು ಬಳಕೆ ಮಾಡಿದ ವಾಹನದ ನಂಬರ್ ಆಧರಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಮೇಲೆ ಜನ ಇಟ್ಟ ಭರವಸೆ ಈಡೇರಿಸುತ್ತೇವೆ. ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ ಮಾಡಬಾರದು. ತನಿಖೆ ಮಾಡಿದ ಬಳಿಕ ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎನ್ನುವುದು ಗೊತ್ತಾಗುತ್ತೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಮಸೂದ್ ಮರ್ಡರ್ ಆದಾಗ 24 ಗಂಟೆಯಲ್ಲಿ ಆರೋಪಿಗಳ ಬಂಧಿಸಿದ್ದೇವೆ. ಪ್ರವೀಣ್ ಕೊಲೆ ಕೇಸ್‌ನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ ಎಂದರು. ಇದನ್ನೂ ಓದಿ: ದಯವಿಟ್ಟು ಯಾರೂ ಪ್ರಚೋದನೆ ಕೊಡುವಂತಹ ಹೇಳಿಕೆ ಕೊಡಬೇಡಿ: ಯು.ಟಿ ಖಾದರ್
ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕಾದ ಕ್ರಮ ತೆಗೆದುಕೊಂಡಿದೆ. ಇದು ಬಹಳ ಸವಾಲಿನ ಕೆಲಸವಾಗಿರುವುದರಿಂದ ನಾವು ಎದುರಿಸುತ್ತೇವೆ. ಮಂಗಳೂರು ಭಾಗದಲ್ಲಿ ಸ್ಪೆಷಲ್ ಡ್ರೈವ್ ನಡೆಸುತ್ತೇವೆ. ಸಾರ್ವಜನಿಕರ ಭಯ ಕಡಿಮೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಂಗಳೂರಿನ ಎಜೆ ಆಸ್ಪತ್ರೆಯಿಂದ ಫಾಝಿಲ್ ಮೃತದೇಹವನ್ನು ಇಂದು ಬೆಳಗ್ಗೆ ಮಂಗಳಪೇಟೆಯಲ್ಲಿರುವ ಮೊಹಿಯುದ್ದೀನ್ ಜುಮ್ಮಾ ಮಸೀದಿಗೆ ತರಲಾಯಿತು.
ಮಸೀದಿಯ ಒಳಗೆ ಮೃತದೇಹ ಕೊಂಡು ಹೋಗಿ ನಮಾಝ್ ಮಾಡಲಾಯಿತು. ಮಸೀದಿಯಲ್ಲಿ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ಬಳಿಕ ಮಂಗಳಪೇಟೆಯ ಮಸೀದಿ ಹಿಂಭಾಗದಲ್ಲಿರುವ ದಫನ್ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಮುಜಾಗ್ರತಾ ಕ್ರಮವಾಗಿ ಸುರತ್ಕಲ್ ಭಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.