ನವದೆಹಲಿ: ಶಿವ ಭಕ್ತರ (ಕನ್ವಾರಿಯಾಗಳಿಗೆ) ಮೇಲೆ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸುತ್ತೀರಿ. ಆದರೆ ಬುಲ್ಡೋಜರ್‌ಗಳ ಮೂಲಕ ಮುಸ್ಲಿಮರ ಮನೆ ಕೆಡವುತ್ತೀರಿ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಸಂಸತ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದೀರಿ. ತುಂಬಾ ಒಳ್ಳೆಯದು. ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಕಾಣಿ ಎಂದು ಹೇಳುತ್ತಿದ್ದೇವೆ. ಅವರ ಮೇಲೆ ಪುಷ್ಪವೃಷ್ಟಿ ಮಾಡುತ್ತೀರಿ. ನಮ್ಮ ಮನೆಗಳನ್ನು ಧ್ವಂಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಿಎಂಎಲ್‌ಎ ಅಡಿ ಬಂಧನ ಮಾಡಬಹುದು – ಇಡಿಗೆ ಸುಪ್ರೀಂನಿಂದ ಸಿಕ್ತು ಪರಮಾಧಿಕಾರ
ಮೀರತ್‌ನ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶಿವ ಭಕ್ತರ ಮೇಲೆ ಹೂವಿನ ದಳಗಳನ್ನು ಸುರಿಸುವ ದೃಶ್ಯ ಹಾಗೂ ಹಾಪುರ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕನ್ವಾರಿಯಾದ (ಶಿವ ಭಕ್ತರು) ಕಾಲುಗಳಿಗೆ ನೋವು ನಿವಾರಕ ತೈಲ ಹಚ್ಚುತ್ತಿರುವ ವೈರಲ್ ದೃಶ್ಯಗಳ ಬಗ್ಗೆ ಈ ವೇಳೆ ಓವೈಸಿ ಮಾತನಾಡಿದರು.
ನೀವು ಅವರ ಪಾದಗಳಿಗೆ ಮಸಾಜ್ ಮಾಡುತ್ತಿರುವುದು ಒಳ್ಳೆಯದು. ಆದರೆ ನೀವು ಸಹರಾನ್‌ಪುರದಲ್ಲಿ ಮುಸ್ಲಿಂ ಯುವಕನನ್ನು ಕರೆದುಕೊಂಡು ಹೋಗಿ ಹೊಡೆಯುತ್ತೀರಿ. ತಾರತಮ್ಯ ಮಾಡಬೇಡಿ. ಸಂವಿಧಾನ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು