68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ತಲೆದಂಡ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ ರಾಷ್ಟ್ರೀಯ ಗರಿ ದೊರೆತಿದೆ. ಕೃಪಾಕರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ವಿಜಯ್ ವಿಶೇಷ ಚೇತನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಟನೆಗಾಗಿ ಮತ್ತೊಮ್ಮೆ ವಿಜಯ್ ನ್ಯಾಷಿನಲ್ ಅವಾರ್ಡ್ ಪಡೆಯುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ, ಸಿನಿಮಾಗೆ ಈ ಬಾರಿ ಪ್ರಶಸ್ತಿ ಸಂದಿದೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್, ಹಲವು ವರ್ಷಗಳ ನಂತರ ಕನ್ನಡಕ್ಕೆ ಇಂಥದ್ದೊಂದು ಗೌರವ ಸಿಗಲು ಕಾರಣರಾಗಿದ್ದರು. ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ ‘ನಾನು ಅವನಲ್ಲ ಅವಳು’ ಸಿನಿಮಾಗಾಗಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಅಲ್ಲದೇ, ವಿಜಯ್ ನಟನೆಯ ನಾಲ್ಕು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಮೂರು ಸಿನಿಮಾಗಳಿಗೆ ಮತ್ತು ಒಂದು ಚಿತ್ರಕ್ಕಾಗಿ ವಿಜಯ್ ವೈಯಕ್ತಿಕ ಪ್ರಶಸ್ತಿ ಪಡೆದಿದ್ದಾರೆ. ಓದಿ: Breaking- 68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ : ಡೊಳ್ಳು, ತಲೆದಂಡ, ನಾದದ ನವನೀತ ಸಿನಿಮಾಗಳಿಗೆ ರಾಷ್ಟ್ರ ಗರಿ
ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದ ವರ್ಷವೇ, ವಿಜಯ್ ನಟನೆಯ ಮಂಸೋರೆ ನಿರ್ದೇಶನದ ‘ಹರಿವು’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಂದಿತ್ತು. ಅಲ್ಲದೇ, 2018ರಲ್ಲಿ ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಸಿನಿಮಾಗೂ ಅತ್ಯುತ್ತಮ ಪ್ರಾದೇಶಿ ಸಿನಿಮಾ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಈ ಸಿನಿಮಾದಲ್ಲೂ ವಿಜಯ್ ನಟಿಸಿದ್ದಾರೆ. ಈ ಬಾರಿ ಕೃಪಾಕರ ನಿರ್ದೇಶನದಲ್ಲಿ ಮೂಡಿ ಬಂದಿರುವ ತಲೆದಂಡ ಸಿನಿಮಾಗೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿಯಾಗಿದೆ. ಈ ಸಂದರ್ಭದಲ್ಲಿ ವಿಜಯ್ ಇರಬೇಕಿತ್ತು ಎನ್ನುವ ಬೇಡಿಕೆ ಹೆಚ್ಚಿದೆ.