ರಾಮನಗರ: ಹೆಚ್.ಡಿ. ಕುಮಾರಸ್ವಾಮಿ ಅವರ ಆಯಸ್ಸು ಗಟ್ಟಿಯಿದೆ. ಅವರಿಗೆ ಬಂದೂಕಿನಿಂದ ಹೊಡೆದರು ಅವರು ಸಾಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಒಂದು ಕಡೆ ಪ್ರವಾಸ ಮಾಡಿದರೆ, ನಾನೊಂದು ಕಡೆಯಿಂದ ಪ್ರವಾಸ ಮಾಡುತ್ತೇನೆ. ನಮ್ಮತ್ರ ದುಡ್ಡಿಲ್ಲ ಕಾಸಿಲ್ಲ. ರಾಮನಗರದ ಜನ 1994ರಲ್ಲಿ ಮಾಡಿದ ಉಪಕಾರಕ್ಕೆ, ನಮ್ಮ ಚರ್ಮ ತೆಗೆದು ನಿಮ್ಮ ಪಾದಕ್ಕೆ ಪಾದಿಕೆ ಮಾಡಿಕೊಟ್ಟರೂ ಋಣ ತಿರಿಸೋಕಾಗಲ್ಲ. ಅಂದು ದೇವೇಗೌಡರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದ್ದೀರಿ. ಈಗ ಕುಮಾರಸ್ವಾಮಿ ಬಂದಿದ್ದಾರೆ. ಕುಮಾರಸ್ವಾಮಿ ನಮ್ಮ ಕರ್ನಾಟಕಕ್ಕೆ ಮಾತ್ರ ನಿಲ್ಲಲ್ಲ. ದೇವೇಗೌಡರು ಯಾವ ಜಾಗಕ್ಕೆ ಹೋಗಿದ್ದರೋ ಆ ಜಾಗಕ್ಕೆ ಹೋಗುವ ಕಾಲವನ್ನು ನಾವು ನೋಡಬಹುದು ಎಂದರು.
ಇತ್ತೀಚೆಗೆ ಕುಮಾರಸ್ವಾಮಿಗೆ ಕೊರೊನಾ ಬಂತು. ಆಗ ನಾನು ದರ್ಗಕ್ಕೆ ಹೋಗಿ ಹರಕೆ ಕಟ್ಟಿಕೊಂಡೆ. ಅಲ್ಲಿ 104 ವರ್ಷದ ಗುರುಗಳು ಹೇಳಿದರು. ಕುಮಾರಸ್ವಾಮಿಗೆ ಬಂದೂಕು ತೆಗೆದು ಹೊಡೆದ್ರು ಅವರು ಸಾಯಲ್ಲ. ಅವರು ಸಿಎಂ ಆಗುತ್ತಾರೆ, ಡೆಲ್ಲಿಗೆ ಹೋಗುತ್ತಾರೆ. ಕುಮಾರಸ್ವಾಮಿ ಆಯಸ್ಸು ಗಟ್ಟಿಯಾಗಿದೆ. ನೀವು ಅವರ ಪಕ್ಕದಲ್ಲಿ ಗಟ್ಟಿಯಾಗಿ ನಿತ್ಕೋಳಿ ಎಂದರು. ಗೌಡರ ಜೊತೆ ಉಪ್ಸಾರು ಮುದ್ದೆ ತಿಂದು ಬೆಳೆದಿದ್ದೇವೆ, ಅದರ ಋಣ ನಮ್ಮಲ್ಲಿದೆ ಎಂದು ತಿಳಿಸಿದರು.
ಎಲ್ಲರೂ ಅವರವರ ಉತ್ಸವ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಉತ್ಸವ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಅವರು ಕರ್ನಾಟಕ ರೈತರ ಉತ್ಸವ ಮಾಡಿದರು. ಯಾಕೆಂದರೆ ನಮಗೆ ಇರುವುದು ನಿಮ್ಮ ಚಿಂತೆ ಆಗಿದೆ. ನಮಗೆ ದಿಲ್ಲಿ ಬೇಡ ಏನು ಬೇಡ. ನಮಗೆ ಹಳ್ಳಿಯಲ್ಲಿ ನೇಗಿಲು ಹೊರುವ ನೀವೇ ನಮಗೆ ಹೈಕಮಾಂಡ್. ಮುಂದೆ ಅಧಿಕಾರ ನಿಶ್ಚಿತ ಯಾರು ಹೆದರಿಸಿದರೂ ಹೆದರಬೇಡಿ. ನನಗೆ ಇರುವುದು ಒಂದೇ ಆಸೆ ಅದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು. ದೇವೇಗೌಡರು ಅವರ ಕಣ್ಣಾರೆ ನೋಡಬೇಕು ಎಂದ ಅವರು, ಕುವೆಂಪು ಅವರು ಬರೆದಂತೆ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಹಿಂದೂ ಮುಸ್ಲಿಂರು ಅಣ್ಣತಮ್ಮಂದಿರಂತೆ ಇರಬೇಕು ಎಂದು ಹೇಳಿದರು.
1994ರಲ್ಲಿ ದೇವೇಗೌಡರನ್ನು ರಾಮನಗರದಲ್ಲಿ ನಿಲ್ಲಿಸಿ ಗೆಲ್ಲಿಸಿ ಬಿಡ್ತೀಯ ಎಂದು ಬೇರೆ ಪಕ್ಷಗಳು ಪ್ರಶ್ನೆ ಮಾಡಿದ್ದರು. ಆದರೆ ಅವರು ಗೆದ್ದು ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದರು. ಈಗ ದೇವೇಗೌಡರಿಗೆ 90 ವರ್ಷ ಆಗಿದೆ. ಆದರೆ ಅವರಿಗೆ ರಾಜ್ಯದ ಚಿಂತೆ ಆಗಿದೆ. ಕಾಂಗ್ರೆಸ್‍ನವರಿಗೆ ಸೋನಿಯಾ ಗಾಂಧಿ ಚಿಂತೆ, ಬಿಜೆಪಿ ಅವರಿಗೆ ಮೋದಿ ಚಿಂತೆ ಆಗಿದೆ. ಜೆಡಿಎಸ್‍ನವರಿಗೆ ರೈತರ ಹಾಗೂ ಕನ್ನಡ ನಾಡಿನ ಜನತೆ ಚಿಂತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಡಿ ಹೊಗಳಿದರು. ಇದನ್ನೂ ಓದಿ: ದಲಿತ ಅಂತಾ ನನ್ನನ್ನು ಕಡೆಗಣಿಸಿದ್ದಾರೆ; ಯೋಗಿ ಸರ್ಕಾರದ ವಿರುದ್ಧ ಆರೋಪ – ಸಚಿವ ರಾಜೀನಾಮೆ
2022ರ ಡಿಸೆಂಬರ್‌ಗೆ ಚುನಾವಣೆ ಬರುತ್ತದೆ. 2023ಕ್ಕೆ ಕುಮಾರಸ್ವಾಮಿ ಸಿಎಂ ಆಗುತ್ತಾರೆ. ನಾನೇ ಡಿಕ್ಲೇರ್ ಮಾಡಿ ಹೋಗುತ್ತಿದ್ದೇನೆ. ಹಿಂದಿನ ಚಾಮುಂಡೇಶ್ವರಿ ಕರಗದಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ಚಾಮುಂಡೇಶ್ವರಿ ಕರಗಕ್ಕೆ ಸಿಎಂ ಆಗಿ ಬಂದು ಉತ್ಸವ ಮಾಡುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ನಮ್ಮ ಪ್ರಧಾನಿ ತಾಯಿ ಹೃದಯದವರು: ಶೋಭಾ ಕರಂದ್ಲಾಜೆ