ಭುವನೇಶ್ವರ: ದುಷ್ಕರ್ಮಿಗಳ ಅತ್ಯಾಚಾರ ಕೃತ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಬಾಲಕಿ ಶಾಲೆಯ ಕಟ್ಟದ ಮೇಲ್ಛಾವಣಿಯಿಂದ ಕೆಳಗೆ ಹಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಮಳೆ ಬರುತ್ತಿದ್ದ ಕಾರಣ ಶಾಲೆಯಲ್ಲಿಯೇ ಇರುವಂತೆ ಬಾಲಕಿ ಮತ್ತು ಆಕೆಯ ಸಹೋದರನಿಗೆ ಸಲಹೆ ನೀಡಿದ್ದ ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಳಿಂಗನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್
ಭಾನುವಾರ ರಾತ್ರಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ತನ್ನ ಸಹೋದರನೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ ಇಳಿದು ಬಂದ ಸಹೋದರ ಮತ್ತು ಬಾಲಕಿಗೆ ಮಳೆ ಬರುತ್ತಿರುವ ಹಿನ್ನೆಲೆ ಶಾಲೆಯ ಕಟ್ಟಡದಲ್ಲಿ ಇರಬಹುದು. ಮಳೆ ನಿಂತ ಬಳಿಕ ತಮ್ಮ ಮನೆಗೆ ಹೊರಡಬಹುದು ಎಂದು ಕಿಡಿಗೇಡಿಗಳ ಗ್ಯಾಂಗ್ ಸಲಹೆ ನೀಡಿತ್ತು. ಮಳೆ ಬರುತ್ತಿರುವ ಹಿನ್ನೆಲೆ ಬಾಲಕಿ ಮತ್ತು ಆಕೆಯ ಸಹೋದರ ಶಾಲೆಯ ಕಟ್ಟದಲ್ಲಿ ಇರಲು ಒಪ್ಪಿಕೊಂಡರು. ಆದರೆ ರಾತ್ರಿ ಹಿಂತಿರುಗಿದ ಐವರು ಆರೋಪಿಗಳು ಬಾಲಕಿಯ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ
ನಂತರ ಬಾಲಕಿ ಮೇಲೆ ಐವರು ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ, ಶಾಲೆಯ ಮೇಲ್ಛಾವಣಿ ಮೇಲೆ ಓಡಿ ಹೋದ ಬಾಲಕಿ ಅಲ್ಲಿಂದ ಕೆಳಗೆ ಜಿಗಿದು ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ವೇಳೆ ಸಹಾಯಕ್ಕಾಗಿ ಸಹೋದರನ ಕಿರುಚಾಡುತ್ತಿರುವುದನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.