ಬೆಂಗಳೂರು: ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ಕೊಲೆಗೆ ಮಸೀದಿಯೊಂದರ ಅಧ್ಯಕ್ಷಗಿರಿ ಪಟ್ಟಕ್ಕಾಗಿ ನಡೆದ ಘರ್ಷಣೆಯೇ ಕಾರಣ ಎನ್ನುವುದು ಇದೀಗ ಬಯಲಾಗಿದೆ.
ಆಯೂಬ್ ಖಾನ್ ಕಳೆದ ಕೆಲ ವರ್ಷಗಳಿಂದ ಟಿಪ್ಪುನಗರದ ಖುದಾಯತ್ ಮಸೀದಿಗೆ ಅಧ್ಯಕ್ಷನಾಗಿದ್ದ. ಆದರೆ ಈ ಅಧ್ಯಕ್ಷ ಸ್ಥಾನದ ಮೇಲೆ ಆಯೂಬ್ ಖಾನ್ ಸಹೋದರ ಪ್ಯಾರೂಖಾನ್ ಮಗ ಮಥೀನ್ ಖಾನ್ ಕಣ್ಣಿಟ್ಟಿದ್ದ. ಅಷ್ಟೇ ಅಲ್ಲದೇ ಮಸೀದಿಯ ಪ್ರೆಸಿಡೆಂಟ್ ಹುದ್ದೆ ಬಿಟ್ಟುಕೊಡುವಂತೆ ಆಯೂಬ್ ಖಾನ್ ಬಳಿ ಹಲವು ಬಾರಿ ಕೇಳಿದ್ದ. ಇದಕ್ಕೆ ಆಯೂಬ್ ಖಾನ್ ನಿರಾಕರಿಸಿದ್ದ. ಅಷ್ಟೇ ಅಲ್ಲದೇ ಆಯೂಬ್ ಖಾನ್ ತನ್ನ ಮಗ ಸಿದ್ದಿಕ್ ಖಾನ್‌ನ್ನು ಮಸೀದಿಗೆ ಅಧ್ಯಕ್ಷನಾಗಿ ಮಾಡಲು ಬಯಸಿದ್ದ.
ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಇದೇ ವಿಚಾರಕ್ಕೆ ಆಯೂಬ್ ಹಾಗೂ ಮಥೀನ್ ನಡುವೆ ಜಗಳವಾಗುತ್ತಿತ್ತು. ನಿನ್ನೆ ಇದು ಜಗಳ ಮೀತಿ ಮೀರಿದ್ದು, ಟಿಪ್ಪುನಗರದ ಮಸೀದಿಯಿಂದ ನಮಾಜ್ ಮುಗಿಸಿ ಬರುವ ವೇಳೆ ಆಯೂಬ್‍ಗೆ ಮಥೀನ್ ಚಾಕು ಇರಿದು ಮನಸ್ಸೋ ಇಚ್ಛೆ ಥಳಿಸಿದ್ದ. ಅಲ್ಲದೆ ಆಯುಬ್‌ನ ಹೊಟ್ಟೆ ಹಾಗೂ ಮರ್ಮಾಂಗಕ್ಕೆ ಚಾಕುವಿನಿಂದ ಇರಿದಿದ್ದನು. ಚಾಕು ಇರಿದ ಜಾಗದಲ್ಲಿ ಸತತವಾಗಿ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದನ್ನೂ ಓದಿ: ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣವೇ ಹೋಯ್ತು!
ಘಟನೆಗೆ ಸಂಬಂಧಿಸಿ ಮೃತ ಆಯೂಬ್ ಖಾನ್ ಪತ್ನಿ ನಜೀಮಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರಿಂದ ಎಫ್.ಐ.ಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ