RSS ನಿಮ್ಮ ಜೊತೆ ಇದೆ: ದಲಿತ, ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಮೋಹನ್‌ ಭಾಗವತ್‌ ಸಂವಾದ

Public TV
3 Min Read
mohan bhagwat

ಚಿತ್ರದುರ್ಗ: ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಇಂದು ದಲಿತ, ಹಿಂದುಳಿದ ವರ್ಗಗಳ 21 ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂವಾದದಲ್ಲಿ ಅನೇಕ ಸ್ವಾಮೀಜಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್, ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ನಮಗೆ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನ. 11ರಿಂದ ಒಂದು ತಿಂಗಳ ಕಾಲ ಬೆಂಗಳೂರು ಡಿಸೈನ್ ಫೆಸ್ಟಿವಲ್: ಅಶ್ವಥ್ ನಾರಾಯಣ

chitradurga swamijis

ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿದಿದ್ದರಿಂದ ಸಂಪರ್ಕ ಮುರಿದು ಹೋಯಿತು. ಹಿಂದೂ ಸಮಾಜದ ಎಲ್ಲಾ ಅಂಗಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿಯಾಗುತ್ತದೆ, ಇದೇ ಸಮರಸತೆ. ಸಮಾಜದ ಎಲ್ಲಾ ಅಂಗಗಳ ಬಗ್ಗೆ ಸಂವೇದನೆ ಇರಬೇಕು. ಪರಸ್ಪರ ಆಗಾಗ ಸೇರುವುದರಿಂದ ನಮಗೆ ಪರಸ್ಪರರ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರವಾಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ. ಆರ್‌ಎಸ್‌ಎಸ್‌ ಮತ್ತು ಮಠಗಳು ಹಾಗೂ ಸ್ವಾಮೀಜಿಗಳೂ ಪರಸ್ಪರ ಮತ್ತೆ ಮತ್ತೆ ಭೇಟಿ ಮಾಡುತ್ತಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಿಗಮ ಮಂಡಳಿ, ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ವಾಪಸ್

ಧರ್ಮವು ಎಲ್ಲ ಕಡೆ ಒಮ್ಮತವಾಗಿ ಇರುವಂತಾಗಬೇಕು. ಮತಾಂತರ ನಮ್ಮಲ್ಲಿ ಪ್ರತ್ಯೇಕತೆಯನ್ನು ತರುತ್ತದೆ. ಹಾಗಾಗಿ ನಾವು ಮತಾಂತರವನ್ನು ತಡೆಯುವ ಪ್ರಯತ್ನ ಮಾಡಬೇಕು. ಆಧುನಿಕ ವಿದ್ಯಾಭ್ಯಾಸದೊಂದಿಗೆ ಶಿಕ್ಷಣ ಸಿಗುತ್ತಿದೆ. ಆದರೆ ಸಂಸ್ಕಾರ ಸ್ವಲ್ಪ ದೂರ ಆಗುತ್ತಿದೆ. ಸಂಸ್ಕಾರ, ನಿಷ್ಠೆ ದೃಢವಾಗಬೇಕು ಎಂದರೆ ಏನಾದರೂ ಒಂದು ರೀತಿಯ ಉಪಾಸನೆಯನ್ನು ಜೋಡಿಸಿಕೊಳ್ಳಬೇಕು. ನೀವು, ಸ್ವಾಮೀಜಿಗಳು. ಸಾಧನೆ, ನಿಯಮಿತ ತಪಸ್ಸನ್ನು ಮಾಡುವವರು. ನೀವು ಸಮಾಜವನ್ನು ಸಂಸ್ಕಾರವಂತ ಸಮಾಜವನ್ನಾಗಿ ಎಬ್ಬಿಸಿ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿ ಬೆಳೆಸಬೇಕಿದೆ. ಸತ್ಯದ ಸಾಧನೆ ಮಾಡುತ್ತಾ ಸರ್ವರ ಸೇವೆ ಮಾಡಬೇಕಿದೆ. ಇಂದು ನೀವೆಲ್ಲಾ ಮಠಾಧೀಶರು ಮಾಡುತ್ತಿರುವ ಪ್ರಯತ್ನ ಬೀಜರೂಪದಲ್ಲಿದೆ. ಇದು ಖಂಡಿತವಾಗಿ ಹೆಮ್ಮರವಾಗಿ ಬೆಳೆಯುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮ್ಮ ಜೊತೆ ಇದೆ. ನಮ್ಮದೇ ಒಂದು ಶೈಲಿ ಇದೆ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ನಾವೆಲ್ಲರೂ ಹಿಂದೂ ಸಮಾಜದ ಅವಿಭಾಜ್ಯ ಅಂಗ ಎಂದು ಹೇಳಿದರು.

ಸಂವಾದದಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಕುಂಚಿಟಿಗ ಮಠದ ಶಾಂತವೀರಶ್ರೀ, ಭಗೀರಥ ಮಠದ ಪುರುಷೋತ್ತಮಾನಂದ ಶ್ರೀ, ಹಡಪದ ಅಪ್ಪಣ್ಣ ಶ್ರೀ, ಈಡಿಗ ಮಠದ ರೇಣುಕಾನಂದ ಶ್ರೀ, ಶ್ರೀಕೃಷ್ಣ ಯಾದವ ಮಠದ ಯಾದವಾನಂದ ಶ್ರೀ, ಕುಂಬಾರ ಗುಂಡಯ್ಯಶ್ರೀ, ಚಲವಾದಿ ಮಠದ ಬಸವ ನಾಗಿದೇವ ಶ್ರೀ, ಹರಳಯ್ಯ ಶ್ರೀ, ಸೇವಾಲಾಲ್ ಶ್ರೀ ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಮಠಾಧೀಶರ ಭೇಟಿ ಬಳಿಕ ಭಾಗವತ್ ಅವರು ಸಂಜೆ ಬೆಂಗಳೂರಿಗೆ ಪಯಣ ಬೆಳೆಸಿದರು. ಇದನ್ನೂ ಓದಿ: ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *