ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಹೊಳೆಗೆ ಬಿದ್ದ ಕಾರು ಪತ್ತೆಯಾಗಿದೆ. ಆದರೆ ಕಾರಿನಲ್ಲಿದ್ದವರು ಇನ್ನೂ ಪತ್ತೆಯಾಗದೇ ಇರುವುದು ಇದೀಗ ಭಾರೀ ಅನುಮಾನಕ್ಕೀಡಾಗಿದೆ. ಈ ಸಂಬಂಧ ನಾಪತ್ತೆಯಾದ ಧನುಷ್ ಮಾವ ರಾಜೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾತ್ರಿ 8:30ಕ್ಕೆ ಊಟ ಮಾಡಿ ಮನೆಯಿಂದ ಹೊರಟಿದ್ದಾನೆ. 11:30ಕ್ಕೆ ಕರೆ ಮಾಡಿದಾಗ 2 ಗಂಟೆವರೆಗೂ ಕೆಲಸ ಇದೆ. ಆಮೇಲೆ ಬರುವುದಾಗಿ ತಿಳಿಸಿದ್ದಾನೆ ಎಂದರು.
ನಂತರ ಪುನಃ 12.01ಕ್ಕೆ ಫೋನ್ ಮಾಡಿ, ಕಾರು ಅಪಘಾತ ಆಗಿದೆ. ನಾಳೆ ಬೆಳಗ್ಗೆ ವಾಹನ ರಿಪೇರಿ ಮಾಡಿ ಬರುತ್ತೇನೆ. ಎಂದು ಹೇಳಿದ್ದಾನೆ. ಆಮೇಲೆ ಫೋನ್ ಮಾಡುವಾಗ ಸ್ವಿಚ್ ಆಫ್ ಅಂತಾ ಬಂದಿದೆ. ಬೆಳಗ್ಗೆ ತುಂಬಾ ಸಲ ಕಾಲ್ ಮಾಡಿದಾಗಲೂ ಸ್ವಿಚ್ ಆಫ್ ಅಂತಾನೇ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರು ಹೊಳೆಗೆ ಉರುಳಿದ ಪ್ರಕರಣ- ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಪತ್ತೆ
12.05ಕ್ಕೆ ಮಸೀದಿಯ ಸಿ.ಸಿ ಕ್ಯಾಮೆರಾದಲ್ಲಿ ಅಪಘಾತ ಆದ ಟೈಮ್ ಇದೆ. ಆದರೆ 12.01ಕ್ಕೆ ಅಪಘಾತ ಆಗಿದೆ ಅಂತಾ ಹೇಳಿದ್ದಾನೆ. ಇಬ್ಬರು ಯುವಕರು ಸಹ ಜೀವಂತವಾಗಿ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ರಾಜೇಶ್ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಅಪಘಾತ ನಡೆದ ಸಮಯ ಹಾಗೂ ಕರೆ ಮಾಡಿ ಅಪಘಾತ ಆಗಿದೆ ಎಂದು ಹೇಳಿದ ಸಮಯ ನೋಡಿದರೆ ಪ್ರಕರಣ ತೀವ್ರ ಅನುಮಾನ ಮೂಡಿಸಿದೆ. ಸ್ಥಳದಲ್ಲಿ ಪೊಲೀಸರು, ಮುಳುಗುತಜ್ಞರು ಹಾಗೂ ಸ್ಥಳೀಯರು ನೆರೆದಿದ್ದು, ಯುವಕರ ಮೊಬೈಲ್ ಟ್ರೇಸ್ ಕಾರ್ಯ ನಡೆಯುತ್ತಿದೆ.