ಬೆಂಗಳೂರು: ಬಿಬಿಎಂಪಿ ಯಮ ಸ್ವರೂಪಿ ಕಸದ ಲಾರಿಗೆ ಇಂದು ಮತ್ತೊಂದು ಜೀವ ಬಲಿಯಾಗಿದೆ. ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದು ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವಿಜಯ ಕಲಾ (37) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ನಾಗರಭಾವಿ ರಿಂಗ್ ರಸ್ತೆಯಲ್ಲಿ ಬೆಳಗ್ಗೆ 9:50ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೈಕ್ ಚಲಾಯಿಸುತ್ತಿದ್ದ ವಿಜಯ ಕಲಾ ಅವರ ಪತಿ ಯೋಗೇಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: BBMP ಕಸದ ಲಾರಿಗೆ ಮತ್ತೊಂದು ಬಲಿ – ಫುಡ್ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ಯೋಗೇಂದ್ರ ಅವರು ಪತ್ನಿ ವಿಜಯ ಕಲಾ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಹಿಂದೆಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಿಜಯ ಕಲಾ ಮೃತಪಟ್ಟಿದ್ದಾರೆ. ಅವರ ಪತಿ ಯೋಗೇಂದ್ರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಬಿಎಂಪಿ ಕಸದ ಲಾರಿಗೆ ಜೀವಗಳು ಬಲಿಯಾಗುತ್ತಿವೆ. ಆದರೆ ಬಿಬಿಎಂಪಿ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಹಿಂದೆಯೂ ಕಸದ ಲಾರಿಗೆ ನಾಲ್ಕು ಜೀವಗಳು ಬಲಿಯಾಗಿದ್ದವು. ಲಾರಿ ಚಾಲಕರ ಅತಿಯಾದ ವೇಗ ಹಾಗೂ ಮದ್ಯ ಸೇವನೆ ಮಾಡಿ ವಾಹನ ಚಾಲಾಯಿಸಿದ್ದೆ ಘಟನೆಗೆ ಕಾರಣ ಎಂದು ಪೊಲೀಸ್ ತನಿಖೆ ವೇಳೆ ದೃಢಪಟ್ಟಿದೆ. ಆದರೆ ಬಿಬಿಎಂಪಿ ಮಾತ್ರ ಅದಕ್ಕೂ ನನಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಕಾಲದಲ್ಲಿ ಗುರು, ಈಗ ಬೇರೆ ಗುರು ಬಂದಿದ್ದಾರೆ: ಎಂಟಿಬಿ