ನವದೆಹಲಿ: ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಓಮಿಕ್ರಾನ್‌ನ ಮತ್ತೊಂದು ಉಪತಳಿ ಪತ್ತೆಯಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ವಹಿಸಿದೆ ಎಂದು WHO ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಕಳೆದ 2 ವಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳು ಶೇ.30 ರಷ್ಟು ಏರಿಕೆ ಕಂಡಿವೆ. ಯುರೋಪ್ ಹಾಗೂ ಅಮೆರಿಕದಂತಹ ದೇಶಗಳಲ್ಲಿ BA-4 ಹಾಗೂ BA-5 ತಳಿಗಳ ಸೋಂಕಿನ ಅಲೆಗಳಿದ್ದು, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹೊಸ ತಳಿ BA-2.75 ಪತ್ತೆಯಾಗಿರುವುದಾಗಿ ಅವರಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷ ಸಮಾಧಿಯಾಗಿದ್ದ ತಾಲಿಬಾನ್ ಸಂಸ್ಥಾಪಕನ ಕಾರು ಪತ್ತೆ – ಮ್ಯೂಸಿಯಂನಲ್ಲಿಡಲು ನಿರ್ಧಾರ
ಹೊಸ ಉಪತಗಳಿಗಳಲ್ಲಿ ಕೆಲವು ಮಾರ್ಪಾಡುಗಳಾಗಿದ್ದು, ಅದೇನೆಂಬುದನ್ನು ಗಮನಿಸಬೇಕಿದೆ. ಈ ಉಪತಳಿಯು ಮಾನವನ ರೋಗನಿರೋಧಕ ಶಕ್ತಿಯನ್ನೂ ಮೀರಿ ಸೋಂಕು ಹರಡುತ್ತದೆಯೇ? ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಮಾಹಿತಿ ನೀಡಿದ್ದಾರೆ.
ಕೋವಿಡ್-19 ಕ್ರಮಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಳಂಭ ಮಾಡುವುದು ಹಾಗೂ ಬೂಸ್ಟರ್ ಡೋಸ್ ಪಡೆದುಕೊಳ್ಳುವಲ್ಲಿ ನಿರುತ್ಸಾಹ ತೋರುತ್ತಿರುವುದು ಪ್ರಕರಣ ಹೆಚ್ಚಲು ಕಾರಣವಾಗಿದೆ. ಬೂಸ್ಟರ್ ಸಾಧ್ಯವಾದಷ್ಟು ಬೇಗನೆ ಪಡೆದುಕೊಂಡರೆ ಮರಣ ಪ್ರಮಾಣವನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ಬಿಜೆಪಿ ನಮ್ಮನ್ನು ಬೆಂಬಲಿಸಿದೆ – ಏಕನಾಥ್ ಶಿಂಧೆ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18 ಸಾವಿರ ಪ್ರಕರಣಗಳನ್ನು ದಾಖಲಾಗಿದ್ದು, ಒಂದೇ ವಾರದಲ್ಲಿ 64,300 ಪ್ರಕರಣಗಳು ಪತ್ತೆಯಾಗಿವೆ. ಇಟಲಿಯಲ್ಲಿ ಜುಲೈ 5ರಂದು ಒಂದೇ ದಿನದಲ್ಲಿ 1.35 ಲಕ್ಷ ಪ್ರಕರಣಗಳು ಹಾಗೂ ಫ್ರಾನ್ಸ್ನಲ್ಲಿ ಕಳೆದ 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಾಗಿ ಟೆಡ್ರೋಸ್ ತಿಳಿಸಿದ್ದಾರೆ.