ಜೈಪುರ: ನಾನು ನನ್ನ ಹೆಂಡತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದು 70 ವರ್ಷದ ವೃದ್ಧನೊಬ್ಬ ನೇಣಿಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಭರತ್‍ಪುರ ಪಟ್ಟಣದಲ್ಲಿ ಬುಧವಾರ 70 ವರ್ಷದ ವೃದ್ಧ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೂಪ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ವಹ್ರಾವಲಿ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ನಡೆದಿದ್ದೇನು?
ಮಥುರಾ ಗೇಟ್ ಠಾಣೆಯ ಅಧಿಕಾರಿ ರಾಮನಾಥ್ ಗುರ್ಜರ್ ಈ ಕುರಿತು ಮಾತನಾಡಿದ್ದು, ನರೇಂದ್ರ ಸಿಂಗ್(70) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಯಹತ್ಯೆ ಮಾಡಿಕೊಳ್ಳುವ ಮುನ್ನ ನರೇಂದ್ರ ಸಿಂಗ್ ಸೂಸೈಡ್ ನೋಟ್ ಬರೆದಿದ್ದು, ತನ್ನ ಸ್ವ-ಇಚ್ಛೆಯಿಂದ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ನನ್ನ ಹೆಂಡತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ಯಾರಿದು?
ಮಾಹಿತಿ ಪ್ರಕಾರ, ನರೇಂದ್ರ ಸಿಂಗ್ ಕಳೆದ 20 ವರ್ಷಗಳಿಂದ ಜಿಲ್ಲಾ ಆಸ್ಪತ್ರೆ ಬಳಿ ಇರುವ ಧರ್ಮಶಾಲೆಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಒಂದು ವರ್ಷದ ಹಿಂದೆ ಅವರ ಪತ್ನಿ ಭಗವಾನ್ ದೇಯಿ ಮೃತಪಟ್ಟರು. ನಂತರ ಅವರು ಒಂಟಿತನವನ್ನು ಅನುಭವಿಸುತ್ತಿದ್ದರು. ಈ ಹಿನ್ನೆಲೆ ತನ್ನ ಪತ್ನಿಯ ಸಾವಿನ ಆಘಾತವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.