ಇದೀಗ ಎಲ್ಲಲ್ಲೂ ರೀಲ್ಸ್ ಹವಾ. ಕೇವಲ ಪಡ್ಡೆಗಳ ಅಡ್ಡೆಯಾಗಿದ್ದ ರೀಲ್ಸ್ ಎಂಬ ಸಾಮಾಜಿಕ ಜಾಲತಾಣವನ್ನು ಸಾಮಾನ್ಯರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಇದೀಗ ಅತೀ ಹೆಚ್ಚು ಬಳಸುತ್ತಿದ್ದಾರೆ. ಮೊನ್ನೆಯಷ್ಟೇ ಕಿಚ್ಚ ಸುದೀಪ್ ಕೂಡ ತಮ್ಮ ಹಾಡಿಗೆ ರೀಲ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ರೀಲ್ಸ್ ಮಾಡಿಯೇ ಬದುಕು ನಡೆಸುತ್ತಿರುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ, ರೀಲ್ಸ್ ಮಾಡುವ ಮುನ್ನ ಈ ಬಗ್ಗೆ ಹುಷಾರಾಗಿರುವುದು ಒಳಿತು.
ಬೈಕ್ ಚಲಾಯಿಸುತ್ತಾ ರೀಲ್ಸ್ ಮಾಡುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಅಂತಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಬೈಕ್ ಓಡಿಸುತ್ತಾ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಹಾಕದೇ ಇರುವುದು, ಫೋನ್ ನಲ್ಲಿ ಮಾತನಾಡುತ್ತಿರುವುದು, ವೇಗವಾಗಿ ಗಾಡಿ ಓಡಿಸುವುದು ಹೀಗೆ ನಾನಾ ಅಪರಾಧಗಳಲ್ಲಿ ಅವರಿಗೆ ದಂಡ ವಿಧಿಸುತ್ತಿದ್ದಾರೆ. ಈ ಹಿಂದೆಯೇ ಟಿಕ್ ಟಾಕ್ ವೀರರಿಗೆ ಇಂಥದ್ದೇ ಬಿಸಿ ಮುಟ್ಟಿಸಿದ್ದರು ಪೊಲೀಸ್ ಅಧಿಕಾರಿಗಳು. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ
ಈವರೆಗೂ 44 ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸ್ ಅಧಿಕಾರಿಗಳು ಅವರ ವಿರುದ್ಧ ಕ್ರಮ ತಗೆದುಕೊಂಡಿದ್ದಾರೆ. ಮತ್ತಷ್ಟು ಜನರಿಗಾಗಿ ಸೋಷಿಯಲ್ ಮೀಡಿಯಾವನ್ನು ಜಾಲಾಡುತ್ತಿದ್ದಾರಂತೆ. ಯಾರೇ ತಪ್ಪು ಮಾಡಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ರೀಲ್ಸ್ ಮಾಡುವ ಮುನ್ನ ಸಾರಿಗೆ ನಿಯಮಗಳನ್ನು ಪಾಲಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ ಎಂದೂ ಅವರು ತಿಳಿಸಿದ್ದಾರೆ.