ನವದೆಹಲಿ: ಬಂಡಾಯದ ಬಾವುಟ ಹಾರಿಸಿ ಮಹಾಮೈತ್ರಿ ಸರ್ಕಾರದ ನಿದ್ದೆ ಕೆಡಿಸಿರುವ ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಶಿವಸೇನೆ ಅನರ್ಹತೆ ಅಸ್ತ್ರ ಪ್ರಶ್ನಿಸಿ ಏಕನಾಥ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜುಲೈ 12 ಸಂಜೆ ಸಂಜೆ 5:30 ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್ ಗೆ ಸೂಚನೆ ನೀಡಿದೆ.
ಏಕನಾಥ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ದ್ವಿಸದಸ್ಯ ಪೀಠದಲ್ಲಿ ನಡೆಯಿತು. ಏಕನಾಥ್ ಶಿಂಧೆ ಪರ ವಾದ ಮಂಡಿಸಿದ ವಕೀಲ ಎನ್.ಕೆ ಕೌಲ್, ಸ್ಪೀಕರ್ ಮೇಲೆ ಅನುಮಾನವಿದ್ದಲ್ಲಿ ಸಂವಿಧಾನದ ಆರ್ಟಿಕಲ್ 179 ಅಡಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅವರನ್ನು ವಜಾಗೊಳಿಸಬಹುದು. ಅದರಂತೆ ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿದೆ. ಈ ನಿರ್ಣಯದ ನಡುವೆ ಡೆಪ್ಯುಟಿ ಸ್ಪೀಕರ್ ಅನರ್ಹತೆ ಅರ್ಜಿ ವಿಚಾರಣೆ ನಡೆಸಲು ಹೊರಟಿಸಿದ್ದಾರೆ. ಇದು ಕಾನೂನು ಬಾಹಿರ ಅಲ್ಲದೇ ಶಾಸಕರ ಒಪ್ಪಿಗೆ ಇಲ್ಲದೇ ಶಾಸಕಾಂಗ ಪಕ್ಷದ ನಾಯಕನ ಅನುಮೋದನೆಯಾಗಿದೆ ಇದು ಸರಿಯಲ್ಲ ಎಂದು ವಾದಿಸಿದ್ದರು. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಜೊತೆ ಮಹಾರಾಷ್ಟ್ರ ಸರ್ಕಾರಕ್ಕೆ ನಂಟು? – ಬಂಡಾಯಕ್ಕೆ ಇದೇ ಕಾರಣ
ಇದಕ್ಕೆ ಪ್ರತಿವಾದ ಮಂಡಿಸಿ ಶಿವಸೇನೆ ಪಕ್ಷದ ವಕೀಲ ಅಭಿಷೇಕ್ ಮನುಸಿಂಘ್ವಿ, ಬಂಡಾಯ ಶಾಸಕರು ಅಧಿಕೃತವಲ್ಲದ ಇಮೇಲ್ ಮೂಲಕ ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ಪತ್ರವನ್ನು ಕಳುಹಿಸಿದ್ದಾರೆ. ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ಈ ಪತ್ರಕ್ಕೂ ಮುನ್ನ ಡೆಪ್ಯುಟಿ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ. ಸ್ಪೀಕರ್ ಅನುಪಸ್ಥಿತಿಯಲ್ಲಿ ಡೆಪ್ಯುಟಿ ಸ್ಪೀಕರ್ ಅನರ್ಹತೆ ಅರ್ಜಿ ವಿಚಾರಣೆ ನಡೆಸಬಹುದು, ಇದಕ್ಕೆ ಪೂರಕವಾಗಿ ಹಲವು ಸುಪ್ರೀಂಕೋರ್ಟ್ ಆದೇಶಗಳಿವೆ ಎಂದು ಹೇಳಿದರು.
ಇನ್ನು ಈ ನಡುವೆ ವಾದ ಮಂಡಿಸಿದ ಡೆಪ್ಯುಟಿ ಸ್ಪೀಕರ್ ಪರ ವಕೀಲ ರಾಜೀವ್ ದವನ್, ವಿಶಾಲ್ ಆಚಾರ್ಯ ಹೆಸರಿನ ವಕೀಲರ ಮೂಲಕ ಅವಿಶ್ವಾಸ ನಿರ್ಣಯದ ಪತ್ರ ಇಮೇಲ್ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ಶಾಸಕರು ಸೂಕ್ತ ಹಾಗೂ ಕಾನೂನು ಮಾರ್ಗದಲ್ಲಿ ಪತ್ರ ಕಳುಹಿಸದರೇ ಪರಿಗಣಿಸಬಹುದಿತ್ತು. ಶಾಸಕರ ಸಹಿಯೊಂದಿಗೆ ಅನಧಿಕೃತ ಮೂಲದಿಂದ ಪತ್ರ ಬಂದಿರುವ ಹಿನ್ನಲೆ ಅದನ್ನು ತಿರಸ್ಕರಿಸಲಾಗಿದೆ. ಇಂತಹ ಪತ್ರಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠ ಅವಿಶ್ವಾಸ ನಿರ್ಣಯ ಮಂಡಿಸಿರುವ ಹೊತ್ತಲ್ಲಿ ಅನರ್ಹತೆ ವಿಚಾರಣೆ ನಡೆಸಲು ಸಾಧ್ಯವಿದೆಯೇ ಎಂದು ಕೋರ್ಟ್ ಟೀಕಿಸಿತು. ಅಲ್ಲದೇ ಐದು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡೆವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಡೆಪ್ಯುಟಿ ಸ್ಪೀಕರ್ ಕಚೇರಿಗೆ ನೋಟಿಸ್ ಜಾರಿ ಮಾಡಿತು.
ಇದೇ ವೇಳೆ ಕೋರ್ಟ್ ಜುಲೈ 12 ವರೆಗೂ ಬಂಡಾಯ ಶಾಸಕರಿಗೆ ಉತ್ತರಿಸಲು ಅವಕಾಶ ನೀಡಬೇಕು. ಅಲ್ಲಿಯವರೆಗೂ ಅನರ್ಹತೆಗೆ ಸಂಬಂಧಿಸಿದ ಯಾವುದೇ ವಿಚಾರಣೆ ನಡೆಸಬಾರದು ಎಂದು ಮಧ್ಯಂತರ ಆದೇಶ ನೀಡಿತು. ಇದೇ ವೇಳೆ ಶಾಸಕರು ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಜವಬ್ದಾರಿ. ಈ ಹಿನ್ನಲೆ ಭದ್ರತೆ ನೀಡಬೇಕು ಎಂದು ಕೋರ್ಟ್ ಆದೇಶಿಸಿತು.
ಈ ನಡುವೆ ಜುಲೈ 11ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದೇವೆ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಮಧ್ಯಂತರ ಆದೇಶದಿಂದ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು ತಾತ್ಕಾಲಿಕವಾಗಿ ಅನರ್ಹತೆ ಅಸ್ತ್ರದಿಂದ ಪಾರಾಗಿದ್ದಾರೆ. ಈ ಅವಧಿಯಲ್ಲಿ ಬಂಡಾಯ ಶಾಸಕರು ಹೊಸ ರಾಜಕೀಯ ಚದುರಂಗದಾಟ ಆಡುವ ಸಾಧ್ಯತೆಗಳಿದೆ.