ಬೇಸ್ ವಿವಿ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ

Public TV
3 Min Read
narendra modi 3

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿರುವ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ(ಬೇಸ್) ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.

ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಸೋಮವಾರ ಬೆಂಗಳೂರಿಗೆ ಬಂದಿಳಿದ ಮೋದಿಯವರ ಈ ಕಾರ್ಯಕ್ರಮದಲ್ಲಿ ಭಾಷಣಗಳಿರಲಿಲ್ಲ ಘೋಷಣೆಗಳಿರಲಿಲ್ಲ. ಮೌನದ ಚೆಲುವಿನಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದುದ್ದಕ್ಕೂ ಬೇಸ್ ಕ್ಯಾಂಪಸ್ಸಿನಲ್ಲಿ ಅವ್ಯಕ್ತ ಸಂಭ್ರಮ ಮನೆಮಾಡಿತ್ತು.

narendra modi 1 2

ಕೊಮ್ಮಘಟ್ಟದಿಂದ ನೇರವಾಗಿ ಬೇಸ್ ಕ್ಯಾಂಪಸ್ ತಲುಪಿದ ಪ್ರಧಾನಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೌರವಾದರಗಳಿಂದ ಬರಮಾಡಿಕೊಂಡರು. ಬಳಿಕ ಮೋದಿ ಅವರು ಮೊದಲಿಗೆ, ಬೇಸ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಸಂವಿಧಾನ ಶಿಲ್ಪಿ ಮತ್ತು ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಮರಣೆಯ ಸಂಕೇತವನ್ನು ಸಮರ್ಪಿಸಿದ ಭಾವ ನೆರೆದಿದ್ದವರಲ್ಲಿ ಮನೆ ಮಾಡಿತ್ತು.

ಇದಾದ ಬಳಿಕ ಬೇಸ್ ಕ್ಯಾಂಪಸಿನ ಆಡಳಿತ ವಿಭಾಗಕ್ಕೆ ತೆರಳಿದ ಅವರು, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್‍ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬೇಸ್ ಪರಿವಾರದ ಪರವಾಗಿ ಅಂಬೇಡ್ಕರರ ಚಿಕ್ಕ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆಯಾಗಿ ಕೊಟ್ಟರು. ಪ್ರಧಾನಿ ಇದನ್ನು ಹರ್ಷಚಿತ್ತರಾಗಿ ಸ್ವೀಕರಿಸಿದರು.

MODI 3

ಮೋದಿ ಅವರ ವೇಳಾಪಟ್ಟಿಯೆಂದರೆ, ಅಲ್ಲಿ ಅರೆನಿಮಿಷವೂ ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ! ಇದಕ್ಕೆ ತಕ್ಕಂತೆ, ರಾಜ್ಯ ಸರಕಾರವು ಟಾಟಾ ಸಮೂಹದ ನೆರವಿನೊಂದಿಗೆ 4,736 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರ್ಕಾರಿ ಐಟಿಐಗಳನ್ನು ರಾಜ್ಯಕ್ಕೆ ಸಮರ್ಪಿಸಿದರು. ಮೋದಿಯವರು ಇವುಗಳ ಚಾಲನೆಗೆ ಗುಂಡಿ ಒತ್ತುತ್ತಿದ್ದಂತೆಯೇ, ರಾಜ್ಯಾದ್ಯಂತ ಇರುವ ಐಟಿಐಗಳೆಲ್ಲ ನೂತನ ಅಧ್ಯಾಯಕ್ಕೆ ತೆರೆದುಕೊಂಡು, ಕ್ರಿಯಾಶೀಲವಾದವು. ಇದನ್ನು ಕಂಡು, ಮೋದಿ ಸಂತಸ ಪಟ್ಟರು.

ಕ್ಷಣಾರ್ಧದಲ್ಲಿ ವಿದ್ಯಾರ್ಥಿಗಳ ಬಳಿಗೆ ಹೋದ ಅವರು, ಅವರೊಂದಿಗೆ ಐದಾರು ನಿಮಿಷ ಕಳೆದು, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು. ಹಾಗೆಯೇ, ಕ್ಯಾಮರಾ ಕ್ಲಿಕ್‍ಗಳಿಗೆ ಸಾಕ್ಷಿಯಾದರು. ಆದರೆ, ಏಕೋ ಸಮಾಧಾನವಾಗದೆ, ಅಲ್ಲಿರುವ ಮೆಟ್ಟಲ ಬಳಿಗೆ ನೀವೆಲ್ಲ ಬನ್ನಿ. ಅಲ್ಲಿ ಫೋಟೋ ಸೆಷನ್ ಆಗಲಿ ಎಂದು ಹೇಳಿ, ಉನ್ನತೀಕರಿಸಿರುವ ಐಟಿಐ ಮಾದರಿಯನ್ನು ವೀಕ್ಷಿಸಲು ತೆರಳಿದರು. ಅಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿಯಿಂದ ಐಟಿಐ ಸಾಧನ-ಸಲಕರಣೆಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.

ಇಲ್ಲಿಂದ, ಕ್ಯಾಂಪಸ್ಸಿನ ಮೆಟ್ಟಿಲುಗಳ ಬಳಿ ತೆರಳಿದ ಅವರು, ಇನ್ನೊಮ್ಮೆ ಕ್ಯಾಮರಾಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಬಂಧಿಯಾದರು. ಇವೆಲ್ಲದರ ಮಧ್ಯೆಯೇ ಕಾರ್ಯಕ್ರಮದಲ್ಲಿದ್ದ ಗಣ್ಯರಿಗೆ ಕೈ ಮುಗಿದು, ಅವರೊಂದಿಗೆ ಅರೆಘಳಿಗೆ ಮಾತನಾಡುತ್ತಲೇ ಮುಂದಡಿ ಇಡುತ್ತ ಹೋದರು. ಬೇಸ್ ಕ್ಯಾಂಪಸ್ಸಿನಿಂದ ಪುನಃ ಕೊಮ್ಮಘಟಕ್ಕೆ ಹೊರಟಾಗಲೂ ಮೋದಿ, ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ, ತಮ್ಮ ಸುಸಂಸ್ಕೃತಿಯನ್ನು ಪ್ರದರ್ಶಿಸಿದರು. ಕೇವಲ ಒಂದು ಗಂಟೆ ಕಾಲಕ್ಕೂ ಕಡಿಮೆ ಅವಧಿಯಲ್ಲಿ ಬೇಸ್ ಆವರಣ ಉಜ್ವಲ ಅಧ್ಯಾಯಕ್ಕೆ ಸಾಕ್ಷಿಯಾಯಿತು. ಇದನ್ನೂ ಓದಿ: ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ

ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಉನ್ನತಾಧ್ಯಯನಕ್ಕೆ ಮೀಸಲಾಗಿರುವ `ಬೇಸ್’ ವಿ.ವಿ.ಯಲ್ಲಿ ಇನ್ನು ಮೂರು ವರ್ಷಗಳಲ್ಲಿ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ. ಹಾಗೆಯೇ, ಮೇಲ್ದರ್ಜೆಗೇರಿಸಿರುವ ಐಟಿಐಗಳಿಂದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಇದನ್ನೂ ಓದಿ: ಬೆಂಗಳೂರಿನ ಜನರು ಕೈ ಜೋಡಿಸಿದ್ರೆ ಏನೂ ಬೇಕಾದ್ರೂ ಮಾಡಬಹುದು: ಮೋದಿ ಮೆಚ್ಚುಗೆ

Live Tv

Share This Article
Leave a Comment

Leave a Reply

Your email address will not be published. Required fields are marked *