ದೇಶದಲ್ಲಿ ಅಗ್ನಿಪಥ್ ಪ್ರತಿಭಟನೆಯ ಕಾವು- ಉತ್ತರದ ಬಳಿಕ ದಕ್ಷಿಣದಲ್ಲಿ ಹಿಂಸಾತ್ಮಕ ಪ್ರೊಟೆಸ್ಟ್

Public TV
3 Min Read
AGNIPATH

ನವದೆಹಲಿ: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉತ್ತರಕ್ಕೆ ಸೀಮಿತವಾಗಿದ್ದ ಪ್ರತಿಭಟನೆ ಕಾವು ಈಗ ದಕ್ಷಿಣಕ್ಕೂ ವಿಸ್ತರಿಸಿದ್ದು, ತೆಲಂಗಾಣ ಹೊತ್ತಿ ಉರಿದಿದೆ. ಉದ್ಯೋಗಾಕಾಂಕ್ಷಿಗಳು ರೈಲುಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದು ಇಡೀ ದೇಶಕ್ಕೆ ಈಗ ಅಗ್ನಿಪಥ್ ಭೀತಿ ಶುರುವಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಅಗ್ನಿಪಥ್ ಗೇಮ್ ಚೇಂಜರ್ ಸ್ಕೀಮ್ ಅಂತಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೊಂಡಿದ್ದರು. ಆದರೆ ಈ ಯೋಜನೆಯ ವಿರುದ್ಧವೇ ಉದ್ಯೋಗಾಕಾಂಕ್ಷಿಗಳು ರೆಬಲ್ ಆಗಿದ್ದಾರೆ. ಯೋಜನೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ನಿನ್ನೆ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ ಅಂತಾ ಉತ್ತರ ಪ್ರದೇಶಕ್ಕೆ ಸೀಮಿತವಾಗಿದ್ದು ಪ್ರತಿಭಟನೆ ಇಂದು ದಕ್ಷಿಣ ಭಾರತಕ್ಕೂ ವ್ಯಾಪ್ತಿಸಿದೆ. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

AGNIPATH 1

ಇಂದು ತೆಲಂಗಾಣದಲ್ಲಿ ಯೋಜನೆ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ರೈಲ್ವೆ ನುಗ್ಗಿದ ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದರು. ಹಿಂಸಾಚಾರದ ನಡುವೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಿಹಾರದಲ್ಲಿ ತೀವ್ರಗೊಂಡ ಹೋರಾಟ: ಪ್ರತಿಭಟನೆಯ ಕೇಂದ್ರ ಬಿಂದು ಬಿಹಾರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಯೋಜನೆಯನ್ನು ಹಿಂಪಡೆಯಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಹೋರಾಟಗಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ‘ಅಗ್ನಿಪಥ್’ ದೇಶ ಸೇವೆ ಮಾಡಲು ಯುವಕರಿಗೆ ಸುವರ್ಣ ಅವಕಾಶ: ರಾಜನಾಥ್ ಸಿಂಗ್

ಬಿಹಾರದ ಸಸಾರಾಮ್‍ನಲ್ಲಿ ಉಪಮುಖ್ಯಮಂತ್ರಿ ರೇಣುದೇವಿ ಅವರ ಬೆಟ್ಟಯ್ಯ ನಿವಾಸದ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಮಾಧೇಪುರದಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಹಾಕಲಾಯ್ತು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಗುಂಡು ಹಾರಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು. ಲಖ್ಮಿನಿಯಾ, ಬಕ್ಸಾರ್‍ನ ಡುಮ್ರಾನ್, ಲಖಿಸರಾಯ್ ರೈಲು ನಿಲ್ದಾಣದಲ್ಲಿ ರೈಲು ಹಳಿಗಳ ನಡುವೆ ಬೆಂಕಿ ಹಚ್ಚಿ ರೈಲು ಸಂಚಾರಕ್ಕೆ ತಡೆ ಒಡ್ಡಲಾಯ್ತು, ಮೊಹಿಯುದ್ದಿನಗರ ನಿಲ್ದಾಣದಲ್ಲಿ ಜಮ್ಮು ತಾವಿ – ಗುವಾಹಟಿ ಅಮರನಾಥ ಎಕ್ಸ್‍ಪ್ರೆಸ್‍ಗೆ ಬೆಂಕಿ ಹಚ್ಚಲಾಯ್ತು ಇದರಿಂದ ಎರಡು ಕೋಚ್‍ಗಳು ಸುಟ್ಟು ಕರಕಲಾದವು.

ಉತ್ತರ ಪ್ರದೇಶ, ಹರಿಯಾಣದಲ್ಲೂ ಪ್ರತಿಭಟನೆ: ಹರಿಯಾಣದ ಮಹೇಂದ್ರಗಢ್ ಜಿಲ್ಲೆಯ ಮಹಾವೀರ ಚೌಕ್‍ನಲ್ಲಿ ಪ್ರತಿಭಟನೆ ನಡೆಯಿತು, ರೈಲು ಸಂಚಾರಕ್ಕೆ ಅಡ್ಡಿ ಪಡಿಸಲಾಯ್ತು. ವಾರಣಾಸಿಯಲ್ಲಿ ಬಸ್‍ಗಳಿಗೆ ಕಲ್ಲು ತೂರಿ ಜಕಂ ಮಾಡಲಾಯ್ತು. ಯಮುನಾ ಎಕ್ಸ್ ಪ್ರೆಸ್ ಹೈವೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ಬಸ್ ಗೆ ಬೆಂಕಿ ಹಾಕಿ ಸುಡಲಾಯ್ತು. ದೆಹಲಿಯಲ್ಲೂ ಪ್ರತಿಭಟನೆ ನಡೆದಿದ್ದು ಕೆಲವು ವಿದ್ಯಾರ್ಥಿಗಳನ್ನು ಬಂಧಿಸಲಾಯ್ತು.

ವಯಸ್ಸಿನ ಮೀತಿ ಹೆಚ್ಚಿಸಿದ ಕೇಂದ್ರ ಸರ್ಕಾರ: ಅಗ್ನಿಪಥ್ ಯೋಜನೆಗೆ ತೀವ್ರ ವಿರೋಧದ ನಡುವೆ ಯೋಜನೆ ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಬಗ್ಗೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯೋಜನೆ ನಿಲ್ಲಿಸಲ್ಲ ಆದರೆ ವಯಸ್ಸಿನ ಮೀತಿ ಈ ವರ್ಷ 17.5-21 ರ ಬದಲು, 17.5- 23 ಕ್ಕೆ ಹೆಚ್ಚಿಸಿದೆ. ಕೊವೀಡ್ ಹಿನ್ನೆಲೆಯಲ್ಲಿ ಈ ರಿಯಾಯ್ತಿ ನೀಡಿದ್ದು ಮುಂದಿನ ವರ್ಷದಿಂದ 17.5-21 ಮೀತಿ ಇರಲಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರತಿಭಟನೆಯ ಬಿಸಿ ಒಂದೊಂದೇ ರಾಜ್ಯಗಳಿಗೆ ವ್ಯಾಪ್ತಿಸುತ್ತಿದ್ದು, ತೀವ್ರ ಹಿಂಸಾ ಸ್ವರೂಪ ಪಡೆದುಕೊಳ್ಳುತ್ತಿದೆ. ರೈಲು ನಿಲ್ದಾಣಗಳೇ ಪ್ರತಿಭಟನಾಕಾರರ ಟಾರ್ಗೆಟ್ ಆಗುತ್ತಿದ್ದು ನಷ್ಟಸ ಜೊತೆಗೆ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕೇಂದ್ರ ಪಟ್ಟು ಸಡಿಲಿಸದ ಹಿನ್ನಲೆ ಮುಂದೆ ಈ ಪ್ರತಿಭಟನೆ ಇನ್ಯಾವ ಸ್ವರೂಪಕ್ಕೆ ತಿರುಗಲಿದೆ ಕಾದು ನೋಡಬೇಕು.

Live Tv

Share This Article
Leave a Comment

Leave a Reply

Your email address will not be published. Required fields are marked *