ಬೆಂಗಳೂರು: ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಸೋನಿಯ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
2 ದಿನದ ಹಿಂದೆ ಬೆಂಗಳೂರಿನಲ್ಲಿ ಇಡಿ ಕಚೇರಿ ಮುತ್ತಿಗೆಗೆ ಮುಂದಾಗಿದ್ದ ಕೈ ಪಾಳಯ ಹೈಡ್ರಾಮ ನಡೆಸಿತ್ತು. ಇಂದು ರಾಜಭವನ ಚಲೋ ಪ್ರಾರಂಭಿಸಿ ಶಕ್ತಿ ಪ್ರದರ್ಶನಕ್ಕೆ ಮಾಂದಾಗಿದ್ದು, ಹೈಡ್ರಾಮಾ ಸೃಷ್ಟಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಪರಮೇಶ್ವರ್, ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್ ಸೇರಿದಂತೆ ನೂರಾರು ನಾಯಕರು ರಾಜಭವನ ಚಲೋ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ರಾಹುಲ್ ಗಾಂಧಿಗೆ ಸತತ ಮೂರು ದಿನಗಳ ಕಾಲ ಇಡಿ ವಿಚಾರಣೆಗೆ ಕರೆದಿರುವುದು ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದೌರ್ಜನ್ಯ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಪ್ರತಿಭಟನೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಭವನ್ ಚಲೋ ಪ್ರಾರಂಭಿಸಿದ್ದು, ರಾಜ್ಯ ಭವನದ ಕದ ತಟ್ಟಲು ಮುಂದಾಗಿದ್ದಾರೆ. ಇದನ್ನೂ ಓದಿ: ಶೆಹಬಾಜ್ ಷರೀಫ್, ಇಮ್ರಾನ್ ಖಾನ್‍ಗಿಂತ ಪತ್ನಿಯರೇ ಹೆಚ್ಚು ಶ್ರೀಮಂತರು
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈಗಾಗಲೇ ಪೊಲೀಸರು ಬ್ಯಾರಿಕೇಡ್ ಹಾಕಿ ಕ್ವೀನ್ಸ್ ರೋಡ್ ಬಂದ್ ಮಾಡಿದ್ದಾರೆ. ಪ್ರತಿಭಟನಕಾರರನ್ನು ತುಂಬಲು ಕ್ವೀನ್ಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್‍ನ್ನು ಪೊಲೀಸರು ಅಡ್ಡ ಹಾಕಿದ್ದಾರೆ. ಶಾಸಕ ರಿಜ್ವಾನ್, ಮಾಜಿ ಸಚಿವ ಜಾರ್ಜ್, ಜಿ.ಪರಮೇಶ್ವರ್, ಪಿ.ಟಿ ಪರಮೇಶ್ವರ್ ನಾಯಕ್ ಕುಣಿಗಲ್ ಶಾಸಕ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹೋರಾಟದಿಂದ ಕೋವಿಡ್ ಹೆಚ್ಚಾದ್ರೆ ಅವರೇ ಹೊಣೆ: ಸಚಿವ ಸುಧಾಕರ್