ನವದೆಹಲಿ/ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ಅಧಿಕಾರಿಗಳ ಮುಂದೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದಾರೆ.
ದೆಹಲಿಯಲ್ಲಿರುವ ಇಡಿ ಕಚೇರಿಗೆ ರಾಹುಲ್ ಗಾಂಧಿ ಅವರು ಬೆಳಗ್ಗೆ 9:30ರ ವೇಳೆಗೆ ತಲುಪುವ ಸಾಧ್ಯತೆಗಳಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಆರೋಪಗಳು ಕೇಳಿ ಬಂದ ಹಿನ್ನೆಲೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಸಂಸದ ರಾಹುಲ್ ಗಾಂಧಿಗೆ ಈ ಹಿಂದೆ ಸಮನ್ಸ್ ನೀಡಲಾಗಿತ್ತು.
ಕೊರೊನಾ ಹಿನ್ನೆಲೆ ಸೋನಿಯಾಗಾಂಧಿ ವಿಚಾರಣೆಯಿಂದ ವಿನಾಯಿತಿ ಕೇಳಿದ್ದು, ಇಂದು ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ನಡುವೆ ತಮ್ಮ ನಾಯಕರಿಗೆ ಇಡಿ ಸಮನ್ಸ್ ನೀಡಿರುವುದನ್ನ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧೆ
ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಲಾಲ್‍ಬಾಗ್‍ನ ಡಬಲ್ ರೋಡ್‍ಗೇಟ್‍ನಿಂದ ಶಾಂತಿನಗರದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದ್ದು, ಬೆಂಗಳೂರು ಜನರಿಗೆ ಇವತ್ತು ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ. ಈ ಮಧ್ಯೆ, ಇಡಿ ನಿಯಂತ್ರಣವನ್ನು ನಮ್ಮ ಪಕ್ಷಕ್ಕೆ ಕೊಟ್ಟರೆ ಬಿಜೆಪಿಯ ದೇವೇಂದ್ರ ಫಡ್ನವೀಸ್ ಕೂಡ ಶಿವಸೇನೆಗೆ ತಮ್ಮ ಮತ ನೀಡುತ್ತಾರೆ ಅಂತ ಸಂಸದ ಸಂಜಯ್ ರಾವುತ್ ಲೇವಡಿ ಮಾಡಿದ್ದಾರೆ.