22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

Public TV
2 Min Read
rafael nadal

ಪ್ಯಾರಿಸ್: ಸ್ಪೇನ್‍ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‍ ಸ್ಲಾಂ ಟೆನಿಸ್ ಟೂರ್ನಿಯ 22 ಗ್ರ್ಯಾನ್ ಸ್ಲಾಂನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಈ ಮೂಲಕ 22ನೇ ಗ್ರ್ಯಾನ್ ಸ್ಲಾಂ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

download 24

ರೋಲ್ಯಾಂಡ್ ಗ್ಯಾರೋಸ್‍ನ ಫಿಲಿಪ್ ಚಾಟ್ರಿಯರ್ ಕೋರ್ಟ್‍ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‍ನಲ್ಲಿ ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 6-3, 6-3, 6-0 ರ ನೇರ ಸೆಟ್‍ಗಳ ಜಯ ಸಾಧಿಸಿದರು. ಇಲ್ಲಿ ತಮ್ಮ 14ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ, ‘ಕ್ಲೇ ಕೋರ್ಟ್ ಕಿಂಗ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗೆದ್ದು ದಾಖಲೆಯ 21ನೇ ಟ್ರೋಫಿ ಜಯಿಸಿದ್ದ ನಡಾಲ್, ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು. 23 ವರ್ಷದ ರೂಡ್, ತನಗಿಂತ 13 ವರ್ಷ ಹಿರಿಯ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದರು. ರೂಡ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳು ನಡಾಲ್ ಮುಂದೆ ನಡೆಯಲಿಲ್ಲ. ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆದ್ದ ನಾರ್ವೆಯ ಮೊದಲ ಆಟಗಾರ ಎನಿಸಿಕೊಳ್ಳುವ ಅವರ ಆಸೆ ಕೈಗೂಡಲಿಲ್ಲ.

ಫ್ರೆಂಚ್ ಓಪನ್‍ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವ ನಡಾಲ್‍ಗೆ ಒಲಿಯಿತು. ಆಂಡ್ರೆಸ್ ಗಿಮೆನೊ ಹೆಸರಲ್ಲಿದ್ದ 50 ವರ್ಷಗಳಷ್ಟು ಹಳೆಯ ದಾಖಲೆಯನ್ನು ಅವರು ಮುರಿದರು. ಸ್ಪೇನ್‍ನವರೇ ಆದ ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.

ಕಳೆದ ಮೂರು ವರ್ಷಗಳಿಂದ ಕ್ಲೇ ಕೋರ್ಟ್ ಟೂರ್ನಿಗಳಲ್ಲಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ರೂಢ್, ನಡಾಲ್‍ಗೆ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

ಮೊದಲ ಸೆಟ್‍ನ ಎರಡನೇ ಗೇಮ್‍ನಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ನಡಾಲ್, ತಮ್ಮ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದರು. ಮುಂದಿನ ಗೇಮ್‍ನಲ್ಲಿ ರೂಡ್, ನಡಾಲ್ ಸರ್ವ್ ಮುರಿದು ತಿರುಗೇಟು ನೀಡಿದರು. ನಾಲ್ಕನೇ ಗೇಮ್‍ನಲ್ಲಿ ಮತ್ತೆ ಎದುರಾಳಿಯ ಸರ್ವ್ ಮುರಿದ ಸ್ಪೇನ್ ಆಟಗಾರ, 3-1ರ ಮುನ್ನಡೆ ಗಳಿಸಿದರು. ಪಂದ್ಯ ಸಾಗಿದಂತೆ ತಮ್ಮ ಹಿಡಿತ ಬಿಗಿಗೊಳಿಸಿ 6-3 ರಲ್ಲಿ ಸೆಟ್ ಗೆದ್ದರು.

ಎರಡನೇ ಸೆಟ್‍ನ ನಾಲ್ಕನೇ ಗೇಮ್‍ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ರೂಡ್ 3-1 ರಲ್ಲಿ ಮೇಲುಗೈ ಸಾಧಿಸಿ, ಮರುಹೋರಾಟದ ಸೂಚನೆ ನೀಡಿದರು. ಆದರೆ ಮುಂದಿನ ಗೇಮ್‍ನಲ್ಲಿ ರೂಡ್ ಸರ್ವ್ ಬ್ರೇಕ್ ಮಾಡಿ, ಬಳಿಕ ತಮ್ಮ ಸರ್ವ್ ಉಳಿಸಿಕೊಂಡ ನಡಾಲ್ 3-3 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕದ ಆಟ ಏಕಪಕ್ಷೀಯವಾಗಿ ನಡೆಯಿತು. ಸತತ ಒಂಬತ್ತು ಗೇಮ್‍ಗಳನ್ನು ಗೆದ್ದುಕೊಂಡು ಟ್ರೋಫಿಗೆ ಮುತ್ತಿಕ್ಕಿದರು.

Share This Article
Leave a Comment

Leave a Reply

Your email address will not be published. Required fields are marked *