ಕಠ್ಮಂಡು: ನೇಪಾಳ ವಿಮಾನ ಪತನಗೊಂಡ ಸ್ಥಳದಲ್ಲಿ ಇದುವರೆಗೂ 16 ಮೃತದೇಹ ಪತ್ತೆಯಾಗಿದ್ದು, ಅದರಲ್ಲಿ 4 ಮಂದಿ ಭಾರತೀಯರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.
ಅಶೋಕ್ ಕುಮಾರ್ ತ್ರಿಪಾಠಿ(54) ಮತ್ತು ಪತ್ನಿ ವೈಭವಿ(51) ತಮ್ಮ ಮಕ್ಕಳೊಂದಿಗೆ ನೇಪಾಳ ಪ್ರವಾಸಕ್ಕಾಗಿ ಹೋಗಿದ್ದರು. ಈ ವೇಳೆ ವಿಮಾನ ಅಪಘಾತಕ್ಕೀಡಾಗಿ ನಾಲ್ಕು ಮಂದಿ ಸುಟ್ಟು ಹೋಗಿದ್ದಾರೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್
ಒಡಿಶಾದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದ ಅಶೋಕ್ ತ್ರಿಪಾಠಿ ಮತ್ತು ಮುಂಬೈನ ಬಿಕೆಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೈಭವಿ ಬಾಂದೇಕರ್ ತ್ರಿಪಾಠಿ ವಿಚ್ಛೇದನ ಪಡೆದುಕೊಂಡಿದ್ದರು. ಇವರ ಮಗ ಧನುಷ್ (22) ಮತ್ತು ಮಗಳು ರಿತಿಕಾ(15) ಥಾಣೆ ನಗರದ ಬಲ್ಕಮ್ ಪ್ರದೇಶದ ರುಸ್ತಂಜೀ ಅಥೇನಾ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದರು.
ಭಾನುವಾರ ಅಶೋಕ್ ತ್ರಿಪಾಠಿ, ವೈಭವಿ ಮತ್ತು ಅವರ ಇಬ್ಬರು ಮಕ್ಕಳು ತಾರಾ ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದರು. ಆದರೆ ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಷೆ ನದಿಯ ಸಮೀಪ 14,500 ಅಡಿ ಎತ್ತರದಲ್ಲಿ ಪರ್ವತದ ತುದಿಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಈ ಹಿನ್ನೆಲೆ ಪ್ರವಾಸ ಕೈಗೊಂಡಿದ್ದ ಇಡೀ ಕುಟುಂಬ ಸುಟ್ಟು ಹೋಗಿದ್ದು, ಅವರ ಅವಶೇಷಗಳು ನೇಪಾಳದ ಪರ್ವತಮಯ ಮುಸ್ತಾಂಗ್ ಜಿಲ್ಲೆಯಲ್ಲಿ ಸೋಮವಾರ ಸಿಕ್ಕಿದೆ.
ವೈಭವಿ ಅವರ 80 ವರ್ಷದ ತಾಯಿ ಮನೆಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಚಿಕ್ಕಮಗಳು ನೋಡಿಕೊಳ್ಳುತ್ತಿದ್ದಾಳೆ. ವಿಮಾನ ಪತನವಾದ ವಿಷಯವನ್ನು ಇನ್ನೂ ವೈಭವಿ ಅವರ ತಾಯಿಗೆ ತಿಳಿಸಿಲ್ಲ ಎಂದು ಥಾಣೆಯ ಕಪುರ್‍ಬಾವಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್
ಟರ್ಬೊಪ್ರೊಪ್ ಟ್ವಿನ್ ಓಟರ್ 9N-AET ವಿಮಾನ ನಾಲ್ವರು ಭಾರತೀಯ ಪ್ರಜೆಗಳು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿತ್ತು. ಮೂವರು ನೇಪಾಳಿ ಸಿಬ್ಬಂದಿ ವಿಮಾನದಲ್ಲಿದ್ದರು.