ಕುವೆಂಪು ಅವಹೇಳನ, ರಾಷ್ಟ್ರಗೀತೆ ತಿರುಚಿ ಬರೆದವರ ವಿರುದ್ಧ ಕ್ರಮಕ್ಕೆ ಕಸಾಪ ಆಗ್ರಹ

Public TV
4 Min Read
MAHESH JOSHI

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯ ತಿರುಚಿ ಬರೆದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಕುವೆಂಪು ಅವರು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿ. ಅವರ ಸಾಹಿತ್ಯವನ್ನು ಓದಿದವರ್ಯಾರೂ ಚಕಾರ ಎತ್ತುವ ಧೈರ್ಯ ಮಾಡುವುದಿಲ್ಲ. ಯಾರು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿ ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

kuvempu

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರನ್ನು ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಶೀಘ್ರವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ: 2 ತಿಂಗಳ ಬಳಿಕ ಅಭ್ಯರ್ಥಿ ಶಾಂತಿಬಾಯಿ ಅರೆಸ್ಟ್

ಪತ್ರದಲ್ಲಿ ಏನಿದೆ?
ಜಗದ ಕವಿ, ಯುಗದ ಕವಿ, ನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕರ್ನಾಟಕದಲ್ಲಿ ಯಾವುದಾದರೂ ಇದೇ ಅಂದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು. ಕುವೆಂಪು ವಿರಚಿತ “ಜಯಭಾರತ ಜನನಿಯ ತನುಜಾತೆ” ಗೀತೆಯನ್ನು “ನಾಡಗೀತೆ” ಮಾಡಬೇಕೆಂದು ಮೊದಲ ಅಳವಡಿಸಿಕೊಂಡಿದ್ದು ಸಾಹಿತ್ಯ ಪರಿಷತ್ತು. 1971ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ತು ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲಾಗುತ್ತಿತ್ತು.

mnd nirmalanandanatha swamiji

ಈ ಮೂಲಗೀತೆ 1924ರಲ್ಲಿ ರಚನೆಯಾಗಿ, ಇಂದಿಗೆ 98 ವರ್ಷವಾಯಿತು. ಎರಡು ಸಲ ಪರಿಷ್ಕರಣೆಗೊಂಡು ಮೈಸೂರಿನ ಸಂಪದಭ್ಯುದಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಮತ್ತೆ ಪರಿಷ್ಕರಣೆಗೊಂಡು ಕುವೆಂಪು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಯಿತು. ಇದು ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಗೀತೆ. ಭಾರತಾಂತರ್ಗತ ಕರ್ನಾಟಕ, ಕರ್ನಾಟಕಾಂತರ್ಗತ ಭಾರತ ಎಂಬುದನ್ನು ಆವೇಶವಿಲ್ಲದೆ, ಘೋಷಣೆಗಳಿಲ್ಲದೆ ಸಾರುವ ಭಾವನಾತ್ಮಕ ಗೀತೆಯಿದು. ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು. ಅದರ ಅನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ, ಪರಿಷತ್ತಿನ ಆಯ್ಕೆಯನ್ನು ದೃಢಗೊಳಿಸಿ, 6-1-2004ರಂದು ಕರ್ನಾಟಕದ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು.

CM Basavaraja Bommai

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ. ಇದನ್ನೂ ಓದಿ: ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪ ನಾಗರಾಜಯ್ಯ ರಾಜೀನಾಮೆ

ʻಮನುಜ ಮತ ವಿಶ್ವಪಥʼ ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಪ್ರಕೃತಿಯಲ್ಲಿ ದೇವರನ್ನು ಕಾಣುವ, ದೇವರಲ್ಲಿ ಪ್ರಕೃತಿಯನ್ನು ಕಾಣುವ ದೈವಿಕ ಸಂಬಂಧಗಳನ್ನು ಪ್ರತಿಪಾದಿಸಿದ ಸರ್ವೋದಯ ತತ್ವಪ್ರತಿಪಾದಕರು ಕುವೆಂಪು ಅವರು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು ʻಸರ್ವಜನಾಂಗದ ಶಾಂತಿಯ ತೋಟʼವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರ್ಯಾರೂ ಸಹ ಕುವೆಂಪು ಅವರ ಕುರಿತು ಚಕಾರ ಎತ್ತುವ ಧೈರ್ಯವನ್ನು ಮಾಡುವುದಿಲ್ಲ. ಯಾರು ಈ ಮಹಾದಾರ್ಶನಿಕರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ.

kuvempu

ಶ್ರೀರಾಮಕೃಷ್ಣ ಪರಮಹಂಸರ, ಶ್ರೀ ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮೀಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆಯನ್ನು ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಖಂಡಿಸುವುದರ ಜೊತೆಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಕುವೆಂಪು ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದುವ ನಾನು, ಅವರ ಪ್ರಕೃತಿ ವರ್ಣನೆಗೆ ಮಾರುಹೋಗುವುದರ ಜೊತೆಗೆ, ಅವರ ಶ್ರೇಷ್ಠ ಚಿಂತನೆಗಳಿಂದ ಪ್ರೇರಿತನಾಗಿ “ಮನುಜ ಮತದಲ್ಲಿ” ನಂಬಿಕೆ ಇಟ್ಟಂಥವನು. ಕುವೆಂಪು ಅವರ ಚಿಂತನೆಯ ಮಾರ್ಗದಲ್ಲಿಯೇ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಾಧಾರಣವಾಗಿ ನನ್ನ ಎಲ್ಲ ಭಾಷಣಗಳಲ್ಲೂ ಕುವೆಂಪು ಅವರ ಚಿಂತನೆಗಳನ್ನು ಉಲ್ಲೇಖಿಸುತ್ತೇನೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ.

ROHITH CHAKRATHIRTHA 1

ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಕ್ರಮಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ತೀರ್ಮಾನ ಬೆಂಬಲಿಸುತ್ತಾ ತಡಮಾಡದೇ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ.

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಹಾಗೂ ಪರಿಷತ್ತಿನ ಎಲ್ಲಾ ಜಿಲ್ಲಾ ಘಟಕಗಳ, ಗಡಿನಾಡ ಘಟಕಗಳ, ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರುಗಳು, ಈ ಖಂಡನೆಗೆ ಒಮ್ಮತದಿಂದ ಕೇಂದ್ರ ಪರಿಷತ್ತಿಗೆ ಬೆಂಬಲವನ್ನು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *