ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ಕೊಲೆ ಮಾಡಿಸಿದ ಕಿಡಿಗೇಡಿ

Public TV
2 Min Read
KILLING CRIME

ಹಾಸನ: ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ದುಷ್ಕರ್ಮಿ ಕೊಲೆ ಮಾಡಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಮೇ.10ರ ರಾತ್ರಿ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಆಟೋಚಾಲಕ ಗಿರೀಶ್ ಕೊಲೆ ನಡೆದಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ಆ ಕ್ಷಣಕ್ಕೆ ಆರೋಪಿಗಳು ಯಾರೂ ಎಂದೇ ಪತ್ತೆಯಾಗಿರಲಿಲ್ಲ. ನಿಂತಿದ್ದ ಆಟೋ ಒಳಗಡೆಯೇ ಗಿರೀಶ್‍ನನ್ನು ಕೊಲೆ ಮಾಡಲಾಯಿತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಹೋಗಿದ್ದು, ಗಿರೀಶ್ ಗೆಳೆಯರೇ ಕೊಲೆಗಾರರು ಎಂಬುದು ತಿಳಿದುಬಂದಿದೆ.

tumakuru police jeep

ನಡೆದಿದ್ದೇನು?
ಕೊಲೆಯಾದ ಹೊಸಕೊಪ್ಪಲು ಆಟೋ ಚಾಲಕ ಗಿರೀಶ್ ಮತ್ತು ಪ್ರಮುಖ ಆರೋಪಿ ವಾಸು ಇಬ್ಬರು ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದರು. ಹಾಗಾಗಿ ಇಬ್ಬರ ನಡುವೆ ಸ್ನೇಹದ ಜೊತೆಗೆ ಹಣಕಾಸಿನ ವ್ಯವಹಾರವೂ ಇತ್ತು. ಕೊರೊನಾ ಹಿನ್ನೆಲೆಯಲ್ಲಿ ಇಬ್ಬರೂ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದರು. ಆಗಲೂ ಇಬ್ಬರ ಸ್ನೇಹ ಮುಂದುವರಿದಿತ್ತು.

ಕೊಲೆಯಾದ ಗಿರೀಶ್ ಬೆಳಗ್ಗೆ ಹಿಮತ್ ಸಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡಿ, ರಾತ್ರಿ ವೇಳೆ ಆಟೋ ಓಡಿಸುತ್ತಿದ್ದ. ವಾಸು ನಗರದ ಎಪಿಎಂಪಿಯಲ್ಲಿ ಸುಂಕ ವಸೂಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ದುಡ್ಡು ಕೊಡುವ, ತೆಗೆದುಕೊಳ್ಳುವ ಸಂಬಂಧ ಮನಸ್ತಾಪವಿತ್ತು. ಇದೇ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದರು. ಈ ವೈಷಮ್ಯದಿಂದಲೇ ಗಿರೀಶ್ ಹತ್ಯೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ

CRIME 2

ಗಿರೀಶ್ ದಿನಚರಿ ಗೊತ್ತಿದ್ದ ವಾಸು ಹಾಗೂ ಅವರ ತಂಡ ಅವನನ್ನು ಸಾಯಿಸಲು ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆ ವಾಸು ಮತ್ತು ಅವರ ತಂಡ ಹಾಸನದ ಹೊಸ ಬಸ್ ನಿಲ್ದಾಣಕ್ಕೆ ಬಂದು ರಾತ್ರಿ 9 ಗಂಟೆ ಸುಮಾರಿಗೆ ಗಿರೀಶ್‍ನನ್ನು ಮದ್ಯಪಾನ ಮಾಡಲು ಕರೆದುಕೊಂಡು ಹೋಗಿದ್ದಾರೆ. ನಂತರ ಹಣಕಾಸು ವಿಷಯಕ್ಕೆ ಜಗಳ ತೆಗೆದು ಅದು ತಾರಕಕ್ಕೇ ಹೋಗಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದರು. ಇವರಲ್ಲಿ ಐದು ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಒಟ್ಟಿನಲ್ಲಿ ಹಣಕಾಸು ವಿಷಯಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಮುಖ ಆರೋಪಿ ಪರಾರಿಯಾಗಿದ್ದು, ಉಳಿದ ಐವರು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *