ಬೆಂಗಳೂರು: ಪುತ್ರ ಬಿ.ವೈ. ವಿಜಯೇಂದ್ರನಿಗೆ ಟಿಕೆಟ್ ನೀಡದಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸಹಜವಾಗಿ ವಿಜಯೇಂದ್ರನಿಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಕಲ್ಪಿಸಿಕೊಡುವ ಭರವಸೆ ನನಗಿದೆ. ಸಾಮರ್ಥ್ಯ ಹಾಗೂ ಪಕ್ಷದಲ್ಲಿ ನಿಷ್ಠೆ ಇರುವವರಿಗೆ ಪಕ್ಷ ಯಾವತ್ತೂ ಕೈ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ಮಗ ವಿಜಯೇಂದ್ರನಿಗೆ ಚುನಾವಣೆಗೆ ಟಿಕೆಟ್ ನೀಡದಿರುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಅವರಿಗೆ ಪಕ್ಷ ಇನ್ನು ಮುಂದೆ ಹೆಚ್ಚಿನ ಅವಕಾಶ ಮಾಡಿ ಕೊಡುತ್ತದೆ. ಇದೆಲ್ಲಾ ಪ್ರಧಾನಿ ಮೋದಿ ಹಾಗೂ ಜೆಪಿ ನಡ್ಡಾ ಅವರಿಗೆ ಬಿಟ್ಟ ವಿಚಾರ. ಟಿಕೆಟ್ ತಪ್ಪಿರುವುದಕ್ಕೂ ಬಿ.ಎಲ್.ಸಂತೋಷ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಅವರ ಹೆಸರು ಬರುತ್ತಿದೆ. ಇದರಲ್ಲಿ ಏನೂ ಅರ್ಥವಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ
2023ಕ್ಕೆ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಗುರಿ. ಆ ದಿಕ್ಕಿನಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡಬೇಕೋ ಅದನ್ನು ಈಗಿಂದಲೇ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಮೋದಿಯವರ ನೇತೃತ್ವದಲ್ಲಿ ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು