ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ ವಿದ್ಯಾರ್ಥಿಗಳು

Public TV
2 Min Read
RSS founder Hedgewar

ಬೆಂಗಳೂರು: ಇನ್ನು ಮುಂದೆ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಭಾಷಣವನ್ನು ಓದಲಿದ್ದಾರೆ.

2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಕೆ.ಬಿ. ಹೆಡ್ಗೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ.

ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ ಪಾಠವನ್ನು ಸೇರಿಸಲಾಗಿದೆ. ಇದನ್ನೂ ಓದಿ: ಸೋಮವಾರದಿಂದ ಶಾಲೆಗಳ ಪ್ರಾರಂಭಕ್ಕೆ ಸಕಲ ಸಿದ್ಧತೆ – ವಿದ್ಯಾರ್ಥಿಗಳ ಸ್ವಾಗತಕ್ಕೆ ತಳಿರು ತೋರಣಗಳಿಂದ ಸಿಂಗಾರ

rohith chakrathirtha

ಪಠ್ಯಪುಸ್ತಕದಲ್ಲಿ 5ನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಪತ್ರಕರ್ತ ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಮತ್ತು ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್” ಪಾಠಗಳನ್ನು ಕೈಬಿಡಲಾಗಿದೆ. ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಸೇರಿಸಲಾಗಿದೆ.

kalaburagi school 2

ಸಾರಾ ಅಬೂಬಕ್ಕರ್ ಅವರ “ಯುದ್ಧ”, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ” ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನು ಕೈಬಿಡಲಾಗಿದೆ. ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ “ಶುಕನಾಶನ ಉಪದೇಶ” ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಲಾಗಿದೆ. ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಠ್ಯ ಕೈ ಬಿಟ್ಟರೂ ಭಗತ್ ಸಿಂಗ್ ಅವರ ಮತ್ತಷ್ಟು ಸಾಹಸ ಕಥೆಯನ್ನು ಸೇರಿಸಲಾಗಿದೆ.

ಇದು ಸೈದ್ಧಾಂತಿಕ ಹೇರಿಕೆ ಅಲ್ಲ ಎಂದು ಪ್ರತಿಕ್ರಿಯಿಸಿದ ರೋಹಿತ್‌ ಚಕ್ರತೀರ್ಥ, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಿಂದ ಯಾವುದೇ ಒತ್ತಡವಿಲ್ಲ. ಪಠ್ಯವನ್ನು ಅಳವಡಿಸಿದರೆ ಯಾವುದೇ ಸಂಘಟನೆಯ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಿದಂತಾಗುವುದಿಲ್ಲ. ನಾವು ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *