ಭ್ರಷ್ಟ ತಿಮಿಂಗಿಲಗಳನ್ನು ರಕ್ಷಿಸಲೆಂದೇ ಸಿಐಡಿ ಗಾಳ: ಭಾಸ್ಕರ್ ರಾವ್

Public TV
3 Min Read
bhaskar rao

ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರವಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.

ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ. ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ ಬಿಜೆಪಿ ನಾಯಕರ ಹೆಸರು ಕೇಳಿಬಂದರೆ, ಆ ಅಭ್ಯರ್ಥಿಯ ವಿಚಾರಣೆಯನ್ನೇ ಕೈಬಿಡಲಾಗುತ್ತಿದೆ. ಇಡೀ ಹಗರಣವನ್ನು ಮುಚ್ಚಿ ಹಾಕಿ, ಬಿಜೆಪಿ ನಾಯಕರನ್ನು ಬಚಾವ್ ಮಾಡಲೆಂದೇ ಸಿಐಡಿ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

SUPREME COURT

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ಮೇಲ್ವಿಚಾರಣೆಯಲ್ಲಿ ಪಿಎಸ್‍ಐ ಹಗರಣದ ಸಮಗ್ರ ತನಿಖೆ ನಡೆಯಬೇಕು. ಆಗ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆದು, ಸತ್ಯಾಂಶ ಹೊರಬರುತ್ತದೆ. ಆಗ ಅಕ್ರಮದಲ್ಲಿ ಭಾಗಿಯಾದ ಎಲ್ಲ ರಾಜಕಾರಣಿಗಳ ಮುಖವಾಡ ಕಳಚಿ ಬೀಳುತ್ತದೆ. ಇಲ್ಲದಿದ್ದರೆ, ಸಿಐಡಿ ತನಿಖೆಯ ಗಾಳಕ್ಕೆ ಕೇವಲ ಸಣ್ಣಪುಟ್ಟ ಮೀನುಗಳು ಬಲಿಯಾಗಿ, ದೊಡ್ಡ ತಿಮಿಂಗಿಲಗಳು ತಪ್ಪಿಸಿಕೊಂಡು ಬಿಡುತ್ತವೆ ಎಂದು ಭಾಸ್ಕರ್ ರಾವ್ ಹೇಳಿದರು.

ಬಿಜೆಪಿ ಸರ್ಕಾರದ ಸಚಿವ ಡಾ. ಅಶ್ವತ್ಥ್ ನಾರಾಯಣ್‍ರವರ ಸಹೋದರನೇ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಸಚಿವರ ಸಹಕಾರವಿಲ್ಲದೇ ಅವರ ಸಹೋದರನಿಗೆ ಅಕ್ರಮವೆಸಗಲು ಸಾಧ್ಯವೇ? ಬಹುತೇಕ ಬಿಡಿಎ ಕಾಮಗಾರಿಗಳನ್ನು ಅಶ್ವತ್ಥ್ ನಾರಾಯಣ್ ಸಹೋದರರ ಮಾಲೀಕತ್ವದ ಹೊಂಬಾಳೆ ಕನ್‍ಸ್ಟ್ರಕ್ಷನ್ ನಿರ್ವಹಿಸುತ್ತಿದ್ದು, ಪಿಎಸ್‍ಐ ನೇಮಕಾತಿಯಲ್ಲೂ ಅವರು ಮೂಗು ತೂರಿಸಿರುವುದು ಆತಂಕಕಾರಿ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ಮೂರು ನೋಟಿಸ್ ನೀಡಿದರೂ ಅವರು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಒದಗಿಸಿಲ್ಲ ಎಂದರು.

ASHWATH NARAYAN

ಸತ್ಯ ಹೊರಬರುವುದು ಕಾಂಗ್ರೆಸ್‍ಗೂ ಇಷ್ಟವಿಲ್ಲ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ. ಇನ್ನು, ಅಶ್ವತ್ಥ್ ನಾರಾಯಣ್‍ರವರು ಈ ಹಿಂದೆಯೂ ನಕಲಿ ಸರ್ಟಿಫಿಕೇಟ್ ನೀಡಿದ್ದರೆಂದು ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಯವರು ಬಹಿರಂಗಪಡಿಸಿದ್ದು, ಅವರು ಕೂಡ ಸಾಕ್ಷಿ ಬಹಿರಂಗ ಪಡಿಸುತ್ತಿಲ್ಲ. ಮೂರೂ ಭ್ರಷ್ಟ ಪಕ್ಷಗಳು ಒಳಒಪ್ಪಂದ ಮಾಡಿಕೊಂಡು ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನು ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಮಾಡಿದ್ದಾರೆಂದು ವಕೀಲ ನಿಯೋಗವು ಸಿಐಡಿಗೆ ದೂರು ನೀಡಿದೆ. ಆ ಮುಖ್ಯಮಂತ್ರಿ ಹಾಗೂ ಅವರ ಮಗ ಯಾರೆಂದು ಬಹಿರಂಗವಾಗಬೇಕು. ಪಿಎಸ್‍ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಕರ್ನಾಟಕ ಸ್ಟೇಟ್ ನರ್ಸಿಂಗ್ ಕೌನ್ಸಿಲ್‍ನಲ್ಲಿನ ಅಕ್ರಮದಲ್ಲೂ ಭಾಗಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ವೈದ್ಯಕೀಯ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾವಿ ಸಚಿವರು ಕೂಡ ಅಕ್ರಮದ ಪಾಲುದಾರರಾಗಿರಬಹುದು. ಸೂಕ್ತ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ. ಪಿಎಸ್‍ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಕರ್ನಾಟಕ ಸ್ಟೇಟ್ ನರ್ಸಿಂಗ್ ಕೌನ್ಸಿಲ್‍ನಲ್ಲಿನ ಅಕ್ರಮದಲ್ಲೂ ಭಾಗಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ವೈದ್ಯಕೀಯ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಭಾವಿ ಸಚಿವರು ಕೂಡ ಅಕ್ರಮದ ಪಾಲುದಾರರಾಗಿರಬಹುದು. ಸೂಕ್ತ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಮುಖ್ಯಮಂತ್ರಿಯಾಗಲು ಎರಡೂವರೆ ಸಾವಿರ ಕೋಟಿ ಬೇಕು ಯತ್ನಾಳ್ ಹೇಳಿಕೆ ತನಿಖೆ ಆಗಲಿ: ಡಿ.ಕೆ. ಶಿವಕುಮಾರ್

dk suresh

ಪಿಎಸ್‍ಐ ನೇಮಕಾತಿ ಪರೀಕ್ಷೆ ಮಾತ್ರವಲ್ಲದೇ ಇತರೆ ಹುದ್ದೆಗಳ ನೇಮಕಾತಿಯಲ್ಲೂ ಭಾರೀ ಆಕ್ರಮ ನಡೆದಿದೆ. ಕೆಪಿಎಸ್‍ಸಿ ಪರೀಕ್ಷೆ ಪಾಸ್ ಮಾಡಿಸುವುದಾಗಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಲಂಚ ಪಡೆದು ವಂಚಿಸಿ, ನಂತರ ಹಣ ವಾಪಸ್ ಕೇಳಿದಾಗಿ ಅಭ್ಯರ್ಥಿ ಮೇಲೆ ಗೂಂಡಾಗಿರಿ ಮಾಡಿದ್ದಾರೆಂದು ಅಭ್ಯರ್ಥಿಯೇ ಆರೋಪ ಮಾಡಿದ್ದಾರೆ. ಸಹಾಯಕ ಉಪನ್ಯಾಸಕರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮವೂ ಬಯಲಾಗಿದೆ. ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‍ರವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಯಾವುದೇ ಅಕ್ರಮವಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಕಳೆದ ವಿಧಾನಸಭಾ ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡಿದರು. ಬೆಂಗಳೂರಿನ 20 ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿದೆ ಎಂದು ಸಿಐಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ಪೊಲೀಸ್ ನೇಮಕಾತಿ ಮಂಡಳಿಯ ಎಡಿಜಿಪಿ ಅಮೃತ್ ಪಾಲ್ ಅಕ್ರಮದಲ್ಲಿ ಭಾಗಿಯಾಗಿರುವುದು ದುರಂತ ಎಂದು ಭಾಸ್ಕರ್ ರಾವ್ ಹೇಳಿದರು.

aap

ಅದಾನಿ ಜೇಬು ತುಂಬಿಸಲು ಸಾಮಾನ್ಯರ ಲೂಟಿ: ಜೀರೋ ಪರ್ಸೆಂಟ್ ಕಮಿಷನ್ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ. 40 ಪರ್ಸೆಂಟ್ ಬಿಜೆಪಿ ಸರ್ಕಾರವು ಅದಾನಿ ಜೇಬು ತುಂಬಿಸಿ ಕಮಿಷನ್ ಪಡೆಯುವ ಬಿಜೆಪಿ ಸರ್ಕಾರದಿಂದ ಇದು ಸಾಧ್ಯವೇ ಇಲ್ಲ ಎಂದು ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರವು ಕಲ್ಲಿದ್ದಲು ಗುತ್ತಿಗೆಯನ್ನು ಅದಾನಿ ಕಂಪನಿಗೆ ನೀಡಿ, ಅಧಿಕ ಬೆಲೆಗೆ ಅದರಿಂದ ವಿದ್ಯುತ್ ಖರೀದಿಸುತ್ತಿದೆ. ಇದರಿಂದ ಸರ್ಕಾರಕ್ಕಾಗುವ ನಷ್ಟವನ್ನು ಭರಿಸಲು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಭಾಸ್ಕರ್ ರಾವ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು ವಿಜಯ್ ಶಾಸ್ತ್ರಿಮಠ್, ಸುರೇಶ್ ರಾಥೋಡ್ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *