ಕೊಲಂಬೋ: ಶ್ರೀಲಂಕಾ ಇದೀಗ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಕನಿಷ್ಠ ಮುಂದಿನ 2 ವರ್ಷಗಳ ವರೆಗೆ ಸಹಿಸಿಕೊಳ್ಳಬೇಕಾಗುತ್ತದೆ ಎಂದು ಶ್ರೀಲಂಕಾ ಹಣಕಾಸು ಸಚಿವ ಅಲಿ ಸಬ್ರಿ ಹೇಳಿದ್ದಾರೆ.
ದ್ವೀಪ ದೇಶ ತಿಂಗಳುಗಳಿಂದ ವಿದ್ಯುತ್, ಆಹಾರ, ಇಂಧನ ಹಾಗೂ ಔಷಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. 1946ರಲ್ಲಿ ಶ್ರೀಲಂಕಾಗೆ ಸ್ವಾತಂತ್ರ ಲಭಿಸಿದ ಬಳಿಕ ಇಷ್ಟೊಂದು ಭಯಾನಕವಾದ ಆರ್ಥಿಕ ಬಿಕ್ಕಟ್ಟನ್ನು ಇದೇ ಮೊದಲ ಬಾರಿಗೆ ನೋಡುತ್ತಿದೆ. ಇದನ್ನೂ ಓದಿ: ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ಬ್ಯಾನ್ ಮಾಡಿದ ತಾಲಿಬಾನ್
ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಅಲಿ ಸಬ್ರಿ, ಜನರು ಸತ್ಯವನ್ನು ತಿಳಿದುಕೊಳ್ಳಬೇಕು. ಜನರು ಈ ಪರಿಸ್ಥಿತಿಯನ್ನು ಗಂಭೀರವಾಗಿ ಅರಿತುಕೊಳ್ಳುತ್ತಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೂ ಈ ಆರ್ಥಿಕ ಪರಿಸ್ಥಿತಿಯನ್ನು ಮುಂದಿನ 2 ವರ್ಷಗಳವರೆಗೆ ಪರಿಹರಿಸುವುದು ದೇಶದಿಂದ ಸಾಧ್ಯವಿಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಕ್ರಮಗಳಿಂದ ಈ ಸಮಸ್ಯೆ ಎಷ್ಟು ಸಮಯದ ವರೆಗೆ ಮುಂದುವರಿಯುತ್ತದೆ ಎಂಬುದು ನಿರ್ಧಾರವಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿದ್ಯುತ್ ಸಮಸ್ಯೆ – 1,100 ರೈಲುಗಳು ರದ್ದು
ಇದೀಗ ಶ್ರೀಲಂಕಾದ ಜನತೆ ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ. ಕೂಲಿಯಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಬಡವರು ಆಹಾರ ಕೊಳ್ಳಲು ಕಷ್ಟಪಡುತ್ತಿದ್ದರೆ, ಇತರರು ಹೆಚ್ಚಿನ ಹಣ ವ್ಯಯಿಸಿ ಆಹಾರ ಖರೀದಿ ಮಾಡುತ್ತಿದ್ದಾರೆ. ಅನೇಕ ಜನರು ಕಷ್ಟದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ದೇಶವನ್ನೇ ತೊರೆಯುತ್ತಿದ್ದಾರೆ.