ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ನವಾಬ್ ಮಲಿಕ್ ಪರ ವಕೀಲರು ತಿಳಿಸಿದ್ದಾರೆ.
ನವಾಬ್ ಮಲಿಕ್‍ಗೆ ಜ್ವರ ಮತ್ತು ವಿಪರೀತ ವಾಂತಿ ಭೇದಿ ಕಾಣಿಸಿಕೊಂಡ ಪರಿಣಾಮ ಜೆ.ಜೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ನವಾಬ್ ಮಲಿಕ್ ಪರ ವಕೀಲ ಕುಶಾಲ್ ಮೋರ್ ಕೋರ್ಟ್‍ನಲ್ಲಿ ತಿಳಿಸಿದ್ದಾರೆ. ನವಾಬ್ ಮಲಿಕ್ ಆರೋಗ್ಯ ಕಳೆದ ಮೂರು ದಿನಗಳಿಂದ ತೀವ್ರ ಹದಗೆಟ್ಟಿದ್ದು, ಈಗಿರುವ ಜೆಜೆ ಆಸ್ಪತ್ರೆಯಲ್ಲಿ ಕೆಲ ಆರೋಗ್ಯ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಈದ್ ಹಬ್ಬದಂದು ಆರತಿ ಮಾಡಬೇಡಿ: ರಾಜ್ ಠಾಕ್ರೆ ಮನವಿ
ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಆರ್.ಎನ್ ರೋಕಡೆ, ನವಾಬ್ ಮಲಿಕ್ ಆರೋಗ್ಯ ಸ್ಥಿತಿಯ ಬಗ್ಗೆ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿ. ಆಸ್ಪತ್ರೆಯ ವರದಿ ಕೇಳಿ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದ್ದಾರೆ.
ನವಾಬ್ ಮಲಿಕ್, ಕಿಡ್ನಿ, ಕಾಲು ಸೇರಿದಂತೆ ಆರೋಗ್ಯದಲ್ಲಿನ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು 6 ವಾರಗಳ ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದರು. ಈ ಹಿಂದೆ 2 ಬಾರಿ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದನ್ನೂ ಓದಿ: ನನ್ನ ಬಂಧನದ ಹಿಂದೆ ಪ್ರಧಾನಿ ಕಾರ್ಯಾಲಯದ ಗೋಡ್ಸೆ ಭಕ್ತ ಕೈವಾಡವಿದೆ: ಜಿಗ್ನೇಶ್ ಮೇವಾನಿ
20 ವರ್ಷಗಳ ಹಿಂದೆ ಮುಂಬೈನ ಕುರ್ಲಾದಲ್ಲಿ 2.75 ಎಕರೆ ಜಾಗಕ್ಕಾಗಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್‌ಗೆ ನವಾಬ್ ಮಲಿಕ್ 55 ಲಕ್ಷ ರೂ. ನಗದು ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ (ಇಡಿ) ಮಾಹಿತಿ ಕಲೆಹಾಕಿತ್ತು. ಇದು ಅಕ್ರಮ ಹಣ ವರ್ಗಾವಣೆ ಎಂಬ ಆರೋಪದಡಿ ಇಡಿ ಫೆ.23 ರಂದು ಮಲಿಕ್‍ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಆ ಬಳಿಕ ಮಲಿಕ್ ವಿರುದ್ಧ ಇಡಿ 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಸ್ತುತ ಕೇಸ್ ವಿಚಾರಣೆಯ ಹಂತದಲ್ಲಿದೆ.