ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹಬ್ಬ – ಇಡೀ ಗ್ರಾಮದ ಆರಾಧ್ಯ ದೈವರಾದ ಜಮಾಲ್ ಮೌಲ್ವಿ

Public TV
3 Min Read
Davangere Hindu Muslim Jamal Moulvi Nagenahalli

ದಾವಣಗೆರೆ: ಹಿಂದೂ, ಮುಸ್ಲಿಂರ ಮಧ್ಯೆ ಸಾಮರಸ್ಯ ಸಾರುವ ಜಾತ್ರೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆಯುತ್ತಿದೆ.

Davangere Hindu Muslim Jamal Moulvi Nagenahalli 3

ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷವೇ ಹೆಚ್ಚಾಗುತ್ತಿದೆ. ಅಂತಹದರಲ್ಲಿ ಈ ನಾಗೇನಹಳ್ಳಿ ದೇಶಕ್ಕೆ ಹಿಂದೂ, ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಇದಕ್ಕೆ ಮುಖ್ಯ ಕಾರಣ ಈ ಗ್ರಾಮದಲ್ಲಿ ಹಿಂದೂಗಳು ಮಾತ್ರ ಇದ್ದಾರೆ. ಆದರೆ, ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದೂಗಳೇ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಅಲ್ಲದೇ, ಆ ದರ್ಗಾಗೆ ಪಕ್ಕದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್

Davangere Hindu Muslim Jamal Moulvi Nagenahalli 2

ಇತಿಹಾಸವೇನು?
ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎನ್ನುವ ಪವಾಡ ಪುರುಷನೊಬ್ಬ ಕೇರಳದಿಂದ ಆಗಮಿಸಿದ್ದ. ಬಹುಕಾಲ ವರ್ಷ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರಿಗೆ ಹಲವಾರ ಪವಾಡಗಳನ್ನು ಮಾಡಿ ತೋರಿಸಿದ್ದ. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರೂಜಿಗಳನ್ನು ತನ್ನ ಪವಾಡದಿಂದ ಹೋಗಲಾಡಿಸಿದ್ದ. ಹೀಗಾಗಿ, ಆಗಿನ ಜನರು ಜಮಾಲ್‍ನನ್ನು ಸ್ವಾಮಿ ಎಂದೇ ನಂಬಿದ್ದರು.

Davangere Hindu Muslim Jamal Moulvi Nagenahalli 5

ಅಲ್ಲದೇ, ಆತ ಕಾಲಾನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನು, ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದೂಗಳೇ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಉರುಸ್ ನಡೆದಿದ್ದು, ಇಲ್ಲಿಯ ಹಿಂದೂ ಜನರೇ ಆತನಿಗೆ ಪ್ರಸಾದ ಮತ್ತು ಮಾಂಸದೂಟ ಪ್ರಸಾದ ಅರ್ಪಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಉರುಸ್ ನಲ್ಲಿ ಸುತ್ತಮುತ್ತಲಿನ ನೂರಾರು ಮುಸ್ಲಿಂ ಬಾಂಧವರು ಕೂಡ ಭಾಗವಹಿಸುತ್ತಾರೆ.

Davangere Hindu Muslim Jamal Moulvi Nagenahalli 4

ಜಮಾಲ್ ಹೆಸರಲ್ಲಿ ಈಗಲೂ ಹಲವಾರು ಪವಾಡಗಳು ನಡೆಯುತ್ತಿವೆ. ಹೀಗಾಗಿ, ದಾವಣಗೆರೆ ಜಿಲ್ಲೆಯ ನಾನಾ ಭಾಗಗಳ ಹಿಂದೂ, ಮುಸ್ಲಿಂ ಜನರು ಈ ಜಮಾಲ್ ಸ್ವಾಮಿ ಸನ್ನಿಧಿಗೆ ಬಂದು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

Davangere Hindu Muslim Jamal Moulvi Nagenahalli 6

ಹೀಗಾಗಿ, ಇದೀಗ ಜಮಾಲ್ ಸ್ವಾಮಿ ಶ್ರೀ ಕ್ಷೇತ್ರ ದಾವಣಗೆರೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷ ಹೆಚ್ಚಿ ದೇಶದಲ್ಲಿ ಕೋಮು ಗಲಭೆಗಳು ಉಂಟಾಗುತ್ತಿವೆ. ಅಲ್ಲದೆ ಇಂದಿನ ರಾಜಕಾರಣಿಗಳು ತಮ್ಮ ರಾಜಕೀಯ ಹಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಹಿಂದೂಗಳು ಮಾತ್ರ ದ್ವೇಷ, ಅಸೂಹೆ ತೋರದೆ ಮುಸ್ಲಿಂ ಧರ್ಮದ ದರ್ಗಕ್ಕೆ ಹೋಗಿ ಗ್ರಾಮದಲ್ಲಿ ಹಬ್ಬ ಮಾಡುತ್ತಾರೆ.

Davangere Hindu Muslim Jamal Moulvi Nagenahalli 7

ನಾಗೇನಹಳ್ಳಿ ಗ್ರಾಮಗಳಲ್ಲಿ ಹಿಂದೂಗಳೇ ಇದ್ದಾರೆ. ದರ್ಗಾವನ್ನು ನಿರ್ಮಾಣ ಮಾಡಿಸಿದವರು ಹಿಂದೂಗಳು. ಈ ಗ್ರಾಮದಲ್ಲಿ ಹೇಳಿಕೊಳ್ಳಲು ಒಂದು ಮುಸ್ಲಿಂ ಕುಟುಂಬ ಇಲ್ಲ. ಜಮಾಲ್ ಸ್ವಾಮಿ ಬಂದು ಇಲ್ಲಿ ಪವಾಡ ಮಾಡಿದ್ದರಿಂದ ಹಿಂದೂಗಳು ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಸನ್ನಿಧಿಯಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಇದನ್ನೂ ಓದಿ: ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ನೀಡಬೇಕು: ಬಿ.ಸಿ.ಪಾಟೀಲ್ 

Davangere Hindu Muslim Jamal Moulvi Nagenahalli 1

ಇಂದು ದೇಶದಲ್ಲಿ ಹಿಂದೂ, ಮುಸ್ಲಿಂ ಎಂದು ಕೋಮುಗಲಭೆ ಸೃಷ್ಟಯಾಗಿ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ನಾಗೇನಹಳ್ಳಿಯ ಹಿಂದೂ-ಮುಸ್ಲಿಂರ ಸಾಮರಸ್ಯ ದೇಶಕ್ಕೆ ಮಾದರಿ ಎನ್ನುವಂತಿದೆ. ಈ ಸಾಮರಸ್ಯ ಇಡೀ ದೇಶದಲ್ಲಿ ವ್ಯಾಪಿಸಲಿ ಎನ್ನುವುದು ನಮ್ಮ ಕಳಕಳಿ.

Share This Article
Leave a Comment

Leave a Reply

Your email address will not be published. Required fields are marked *